ಉಡುಪಿ : ಕಾರ್ಕಳದ ವೆಂಕಟರಮಣ ದೇವಸ್ಥಾನದ ಲಕ್ಷದೀಪೋತ್ಸವದ ಸಂದರ್ಭದಲ್ಲಿ ಜಾತ್ರಾ ವ್ಯಾಪಾರಕ್ಕೆ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ನೀಡಬೇಕು ಎಂದು ವಿನಂತಿಸಿದ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರು ದಾಖಲಿಸಿದ ಸುಮೊಟೋ ಪ್ರಕರಣಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿ ಸೋಮವಾರ ಉಡುಪಿಯ ಬ್ರಹ್ಮಗಿರಿಯ ಆಸ್ಕರ್ ಫೆರ್ನಾಂಡಿಸ್ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಕಳ ಶಾಸಕ ಸುನೀಲ್ ಕುಮಾರ್, ಹಿಂದುತ್ವವನ್ನು ನೇರವಾಗಿ ಎದುರಿಸಲು ಸಾಧ್ಯವಾಗದ ಕಾಂಗ್ರೆಸ್ ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ಹಿಂದೂ ಕಾರ್ಯಕರ್ತರ ಮೇಲೆ ಈ ರೀತಿ ಪ್ರಕರಣಗಳನ್ನು ದಾಖಲಿಸುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಹಿಂದೂ ಕಾರ್ಯಕರ್ತರಿಂದ ಅಶಾಂತಿಯ ಸೃಷ್ಟಿಸುವ ಒಂದೇ ಒಂದು ಘಟನೆ ನಡೆದಿಲ್ಲ. ಯಾವುದೇ ದೂರು ದಾಖಲಾಗಿಲ್ಲ. ಆದರೂ ಕಾಂಗ್ರೆಸ್ ಸರಕಾರದ ಕುಮ್ಮಕ್ಕಿನಿಂದ ಪೊಲೀಸ್ ಇಲಾಖೆ ಹಿಂದೂ ಕಾರ್ಯಕರ್ತರ ಮೇಲೆ ಸುಮೊಟೋ ಕೇಸ್ ಹಾಕುತ್ತಿರುವುದು ನಾಚಿಕೆಗೇಡಿನ ವಿಷಯ. ಖಾಕಿ ಖಾಕಿಯಾಗಿಯೇ ಉಳಿಯಬೇಕು, ಖಾಕಿ ಕಾಂಗ್ರೆಸ್ ಆಗಬಾರದು ಎಂದರು
ಪ್ರತಿಭಟನೆಯಲ್ಲಿ ಶಾಸಕರಾದ ಯಶ್ಪಾಲ್ ಸುವರ್ಣ, ಸುರೇಶ್ ಶೆಟ್ಟಿ ಗುರ್ಮೆ, ಕಿರಣ್ ಕೊಡ್ಡಿ ಗುರುರಾಜ್ ಗಂಟಿಹೊಳೆ, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಹಿಂದೂ ಸಂಘಟನೆಯ ಮುಖಂಡರಾದ ಸುನೀಲ್ ಕೆ.ಆರ್. ದಿನೇಶ್ ಮೆಂಡನ್, ಮಹೇಶ್ ಬೈಲೂರು, ಜಯರಾಂ ಅಂಬೆಕಲ್ಲು, ಪುನೀತ್ ರಾಜ್ ಮಂಗಳೂರು, ಪಕ್ಷದ ನಾಯಕರಾದ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ ಜಿತೇಂದ್ರ ಶೆಟ್ಟಿ ಉದ್ಯಾವರ, ಪ್ರಭಾರಕ ಪೂಜಾರಿ, ಗೀತಾಂಜಲಿ ಸುವರ್ಣ, ರೇಶ್ಚಾ ಉದಯ್ ಶೆಟ್ಟಿ, ವಿಜಯ್ ಕೊಡವೂರು, ಕಿದಿಯೂರು ಉದಯ್ ಕುಮಾರ್ ಶೆಟ್ಟಿ ಸೇರಿದಂತೆ ಮೊದಲಾದವರ ಉಪಸ್ಥಿತರಿದ್ದರು.