ಬೀದರ್ : ವಕ್ಸ್ ಭೂ ಕಬಳಿಕೆ ವಿರೋಧಿ ಜನಜಾಗೃತಿ ಹೋರಾಟ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರಾದ ಬಸವನಗೌಡ ಪಾಟೀಲ ಯತ್ನಾಳ ಮತ್ತು ರಮೇಶ ಜಾರಕಿಹೊಳಿ ನೇತೃತ್ವದ ತಂಡ, ಸೋಮವಾರ ತಾಲೂಕಿನ ಧರ್ಮಾಪುರ ಗ್ರಾಮಕ್ಕೆ ಭೇಟಿ ನೀಡಿ ಜನರಿಂದ ಅಹವಾಲು ಸ್ವೀಕಾರ ಮಾಡಿದರು.
ಜಮೀನುಗಳಲ್ಲಿ ವಕ್ಸ್ ಹೆಸರು ಸೇರ್ಪಡೆ ಕುರಿತಂತೆ ತಂಡವು ಗ್ರಾಮದ ಹಲವು ಜನರಿಂದ ಮಾಹಿತಿ ಸಂಗ್ರಹ ಮಾಡಿತು. ಈ ವೇಳೆ ಪಹಣಿಯಿಂದ ವಕ್ಸ್ ಅಂತ ತೆಗೆಯುವುದಲ್ಲ ವಕ್ಸ್ ಬೋರ್ಡನ್ನೇ ತೆಗೆಯಬೇಕು ಎಂದು ಆಗ್ರಹಿಸಿದರು. 2011ರಲ್ಲಿ ಪಹಣಿಯಲ್ಲಿ 11ನೇ ಕಾಲಂನಲ್ಲಿ ಖಾಲಿ ಇತ್ತು, ಬಳಿಕ ಮನೆಗಳನ್ನು ಕಟ್ಟಲಾಗಿದೆ ಎಂದು ನಮೂದಿಸಿತ್ತು. ಬಳಿಕ ಮನೆ ಎನ್ನುವುದನ್ನು ತೆಗೆದು, ವಕ್ಸ್ ಆಸ್ತಿ ಅಂತ ಸೇರಿಸಲಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಇದನ್ನು ಸೇರಿಸುವ ಕೆಲಸ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ವೇಳೆ ಜನರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ಎಲ್ಲೆಲ್ಲಿ ಮುಸ್ಲಿಂ ಜಿಲ್ಲಾಧಿಕಾರಿ ಗಳಿದ್ದರೋ ಅಲ್ಲಿ ವಕ್ಸ್ ಅಂತ ಮಾಡಿದ್ದಾರೆ.. ಬೀದರ ಜಿಲ್ಲೆಯಲ್ಲಿ ಜಾಫರ್ ಎಂಬ ಅಧಿಕಾರಿ ಬಂದು ಇಡೀ ಊರನ್ನೇ ವಕ್ಸ್ ಎಂದು ಮಾಡಿದ್ದಾರೆ. ಮಿನಿ ಪಾಕಿಸ್ತಾನ ಮಾಡಲು ಹೊರಟಿದ್ದಾರೆ. ಮಹರ್ಷಿ ವಾಲ್ಮೀಕಿ ಜಾಗ, ಮನೆಗಳು, ದೇವಸ್ಥಾನಗಳು, ಜೊತೆಗೆ ಆಳಂದದಲ್ಲಿ ಪೊಲೀಸ್ ಸ್ಟೇಷನ್, ಕ್ವಾಟ್ರಸ್ ಎಲ್ಲವೂ ವಕ್ಸ್ ಮಾಡಿದ್ದಾರೆ ಎಂದು ಹೇಳಿದರು.