ಕಿರಿಮಂಜೇಶ್ವರ : ನವೆಂಬರ್ 26ರಂದು ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಭಾರತ ಸಂವಿಧಾನದ 75ನೇ ವರ್ಷಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಸಂವಿಧಾನದ ಪ್ರತಿಜ್ಞಾವಿಧಿಯನ್ನು ಸಮಾಜ ವಿಜ್ಞಾನ ಕ್ಲಬ್ ನಾಯಕಿಯಾದ ದಿವ್ಯಶ್ರೀ ಬೋಧಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು . ಕ್ಲಬ್ ನ ಸದಸ್ಯೆಯಾದ ಸಂಜನಾ ಮಿತ್ರರಿಗೆ ಸಂವಿಧಾನದ ಆಶೋತ್ತರಗಳು ಹಾಗೂ ಸಂವಿಧಾನ ದಿನವನ್ನು ನೆನಪಿಸಿಕೊಳ್ಳುವ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಟ್ಟರೆ, ಸಮಾಜ ವಿಜ್ಞಾನ ಶಿಕ್ಷಕಿಯಾಗಿರುವ ದೀಪಿಕಾ ದೇವಾಡಿಗ ಅವರು ಸಂವಿಧಾನದ ಪೀಠಿಕೆಯನ್ನು ವಾಚಿಸಿದರು. ಸಮಾಜ ವಿಜ್ಞಾನ ಶಿಕ್ಷಕರಾಗಿರುವ ರಾಘವೇಂದ್ರ ಅವರು ಸಂವಿಧಾನದ ರಚನೆ ಮತ್ತು ಧ್ಯೇಯೋದ್ದೇಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನದಟ್ಟಾಗುವಂತೆ ವಿವರಿಸಿದರು.
ಈ ಸಮಾರಂಭದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ಮುಖ್ಯ ಶಿಕ್ಷಕಿಯಾಗಿರುವ ದೀಪಿಕಾ ಆಚಾರ್ಯ ಅವರು ಸಂವಿಧಾನದ ರಚನೆ ಮತ್ತು ಸಂವಿಧಾನದ ವಿಧಿಗಳ ಕುರಿತು ಸವಿಸ್ತಾರವಾಗಿ ಮಾತನಾಡಿ ಸಂವಿಧಾನ ತತ್ವಗಳನ್ನು ಅಳವಡಿಸಿಕೊಳ್ಳುವಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ತಿಳಿಸಿದರು.
ಈ ಸಮಾರಂಭದಲ್ಲಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ಬೋಧಕ ಮತ್ತು ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಮಾಜ ವಿಜ್ಞಾನ ಕ್ಲಬ್ ನ ಸದಸ್ಯೆ ತನುಶ್ರೀ ಸ್ವಾಗತಿಸಿ , ಮಾನಸ ವಂದಿಸಿ, ಸಮಾಜ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಸುಬ್ರಹ್ಮಣ್ಯ ಮರಾಠಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.