ನವದೆಹಲಿ : ಎಲ್ಲ ನಾಗರಿಕರು ತಮ್ಮ ನಿತ್ಯ ಜೀವನದಲ್ಲಿ ಸಾಂವಿಧಾನಿಕ ಆದರ್ಶಗಳನ್ನು ಅಳವಡಿಕೊಳ್ಳಬೇಕು. ಮೂಲಭೂತ ಕರ್ತವ್ಯಗಳನ್ನು ಅನುಸರಿಸಿ ಮತ್ತು 2047ರ ವೇಳೆಗೆ ವಿಕಸಿತ ಭಾರತ ನಿರ್ಮಿಸುವ ರಾಷ್ಟ್ರೀಯ ಗುರಿಗೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಕರೆ ನೀಡಿದ್ದಾರೆ
ಭಾರತ ಸಂವಿಧಾನವನ್ನು ಅಂಗೀಕರಿಸಿ 75ವರ್ಷಗಳು ಸಂದ ನಿಮಿತ್ತ ಹಳೆಯ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನಡೆದ ‘ಸಂವಿಧಾನ ದಿವಸ್’ ಆಚರಣೆ ವೇಳೆ ಸಂಸತ್ತಿನ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗವು ಸಾಮಾನ್ಯ ಜನರ ಜೀವನವನ್ನು ಉತ್ತಮಗೊಳಿಸಲು ಒಟ್ಟಾಗಿ ಕೆಲಸ ಮಾಡಬೇಕು’ ಎಂದರು.
‘ನಮ್ಮ ಸಂವಿಧಾನವು ಜೀವಂತ ಮತ್ತು ಪ್ರಗತಿಪರ ದಾಖಲೆಯಾಗಿದೆ. ನಮ್ಮ ಸಂವಿಧಾನದ ಮೂಲಕ ನಾವು ಸಾಮಾಜಿಕ ನ್ಯಾಯ ಮತ್ತು ಅಂತರ್ಗತ ಅಭಿವೃದ್ವಿಯ ಗುರಿಗಳನ್ನು ಸಾಧಿಸಿದ್ದೇವೆ’ ಎಂದು ಹರ್ಷಿಸಿದರು.
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮಾತನಾಡಿ, ’75 ವರ್ಷಗಳಹಿಂದೆ ಸಂವಿಧಾನದ ಅಂಗೀಕಾರಗೊಂಡಿತು. ಈ ದಿನದಂದು, ಈ ಪವಿತ್ರ ಕೊಠಡಿಯಲ್ಲಿ ನಮ್ಮ ಸಂವಿಧಾನವನ್ನು ಅಂಗೀಕರಿಸಲಾಯಿತು, ಇದು ನಮ್ಮ ಪೂರ್ವಜರ ಸಮರ್ಪಣೆ, ತ್ಯಾಗ ಮತ್ತು ದೂರದೃಷ್ಟಿಗೆ ಸಾಕ್ಷಿ. ಜನಪ್ರತಿನಿಧಿಗಳು ಸದನದಲ್ಲಿ ನಮ್ಮ ಸಂವಿಧಾನ ಪ್ರತಿಪಾದಿಸಿರುವ ಆದರ್ಶಗಳನ್ನು ಎತ್ತಿಹಿಡಿಯುವಂಥ ಚರ್ಚೆ ಮಾಡಬೇಕು. ಈ ನಿಟ್ಟಿನಲ್ಲಿ ಶಪಥ ಮಾಡಬೇಕು ಎಂದು ನುಡಿದರು