Home » ಉತ್ತಮ ಗ್ರಂಥಗಳ ಓದುವಿಕೆಯಿಂದ ಬೌದ್ಧಿಕ ಮಟ್ಟ ಉನ್ನತಿಯಾಗುತ್ತದೆ
 

ಉತ್ತಮ ಗ್ರಂಥಗಳ ಓದುವಿಕೆಯಿಂದ ಬೌದ್ಧಿಕ ಮಟ್ಟ ಉನ್ನತಿಯಾಗುತ್ತದೆ

- ಶ್ರೀಧರ ಶಾಸ್ತ್ರಿ

by Kundapur Xpress
Spread the love

ಕುಂದಾಪುರ : ಇಂದಿನ ಯುವ ಸಮುದಾಯ ಹೆಚ್ಚು ಹೆಚ್ಚು ಗ್ರಂಥಗಳನ್ನು ಓದುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು. ಓದು ಕೇವಲ ಪಠ್ಯ ಪುಸ್ತಕಗಳಿಗೆ ಸೀಮಿತವಾಗಿರದೆ ಮಹಾಪುರುಷರ, ಸಾಧು ಸಂತರ, ಸಮಾಜ ಸುಧಾರಕರ, ಶ್ರೇಷ್ಠ ಸಾಹಿತಿಗಳ, ರಾಷ್ಟ್ರ ನಿರ್ಮಾಪಕರ, ದಾರ್ಶನಿಕರ ಗ್ರಂಥಗಳನ್ನು ಓದುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಯ ಜ್ಞಾನಾರ್ಜನೆ ಹೆಚ್ಚುವುದಲ್ಲದೇ ಉತ್ತಮ ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನು ಕಲಿಯಲು ಸಹಾಯವಾಗುತ್ತದೆ. ಆದರೆ, ಇಂದಿನ ಯುವ ಪೀಳಿಗೆ ಜಾಲತಾಣಗಳ ಆಸರೆಯಿಂದ ಸ್ವವಿವೇಚನೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಇದು ಬಹಳ ಆತಂಕದ ಸಂಗತಿ ಎಂದು ಶ್ರೀಧರ ಶಾಸ್ತ್ರಿ, ಪದವೀದರ ಸಹಾಯಕ ಶಿಕ್ಷಕರು ಸರ್ಕಾರಿ ಪ್ರೌಢ ಶಾಲೆ ಗುಂಡ್ಮಿ ಇವರು ಅಭಿಪ್ರಾಯಪಟ್ಟರು. ಇವರು ಶ್ರೀ ಕಾಳಾವರ ವರದರಾಜ ಎಂ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕುಂದಾಪುರ ಇಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ ಅವರು ಮಾತನಾಡಿ ವಿದ್ಯಾರ್ಥಿಗಳು ಓದನ್ನು ಕೇವಲ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದನ್ನು ಗುರಿಯಾಗಿ ಇಟ್ಟುಕೊಂಡರೆ ನಮ್ಮ ಜ್ಞಾನ ಅಷ್ಟಕ್ಕೆ ಸೀಮಿತವಾಗಿ ಬಿಡುತ್ತದೆ. ವಿದ್ಯಾರ್ಥಿ ದೆಸೆಯಲ್ಲಿ ಇರುವಾಗಲೇ ಉತ್ತಮ ಪುಸ್ತಕಗಳನ್ನು ಓದಿ ಜ್ಞಾನವನ್ನು ಸಂಪಾದಿಸಿದರೆ ಜೀವನದುದ್ದಕ್ಕೂ ಆ ವ್ಯಕ್ತಿ ಒಳ್ಳೆಯ ವಿಚಾರಗಳನ್ನು ರೂಢಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳುತ್ತಾನೆ. ಉತ್ತಮ ಗ್ರಂಥಗಳನ್ನು ಓದುವುದರಿಂದ ವಿದ್ಯಾರ್ಥಿಗಳಲ್ಲಿ ಸದ್ವಿಚಾರಗಳು ಮೂಡುವುದರ ಜೊತೆಗೆ ಉತ್ತಮ ಬರವಣಿಗೆ ಶೈಲಿಯನ್ನು ಕಲಿಯಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾಲೇಜಿನ ಗ್ರಂಥಪಾಲಕರು ಹಾಗೂ ಕಾರ್ಯಕ್ರಮದ ಸಂಘಟಕರೂ ಆದ ರವಿಚಂದ್ರ ಹೆಚ್.ಎಸ್ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿ ಅಥಿತಿಗಳನ್ನು ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಾಗರಾಜ ವೈದ್ಯ ಹಾಗೂ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕರಾದ ನಾಗರಾಜ ಯು ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಾಚನಾಲಯ ಸಮಿತಿಯ ವಿದ್ಯಾರ್ಥಿ ಸದಸ್ಯರಾದ ಚೈತನ್ಯ, ಅಂತಿಮ ಎಂಕಾಂ ಕಾರ್ಯಕ್ರಮವನ್ನು ನಿರೂಪಿಸಿದರು. ಪುಷ್ಪಲತ ಮತ್ತು ಸಂಗಡಿಗರು ಪ್ರಾರ್ಥನೆಗೈದರು. 

   

Related Articles

error: Content is protected !!