ಹೊಸದಿಲ್ಲಿ : ಬಾಂಗ್ಲಾದೇಶ ಪ್ರಕ್ಷುಬ್ಧತೆ ಎದುರಿಸುತ್ತಿದೆ. ಹಿಂದೂಗಳ ಮೇಲಿನ ದಾಳಿ, ಧಾರ್ಮಿಕ, ಮುಖಂಡ ಚಿನ್ಮಯ ಕೃಷ್ಣದಾಸ ಬಂಧನ ಬೆನ್ನಲ್ಲೇ ಇಸ್ಕಾನ್ ನಿಷೇಧ ಮಾಡಲು ಮುಹಮ್ಮದ್ ಯೂನಸ್ ಸರ್ಕಾರ ಮುಂದಾಗಿದೆ.
ಇಸ್ಕಾನ್ ಬಾಂಗ್ಲಾದೇಶದಲ್ಲಿ ಹಿಂದೂಗಳ ರಕ್ಷಣೆಗಾಗಿ ಹೋರಾಡುತ್ತಿರುವ ಸಂಘಟನೆಯಾಗಿದ್ದು ಇದನ್ನು ಧಾರ್ಮಿಕ ಮೂಲ ಭೂತವಾದಿ ಸಂಘಟನೆ ಎಂದು ಬಾಂಗ್ಲಾ ಸರ್ಕಾರ ಕರೆದಿದೆ. ಮಾತ್ರವಲ್ಲ ಇಸ್ಕಾನ್ ನಿಷೇಧಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ಘೋಷಿಸಿದೆ.
ಇಸ್ಕಾನ್ ಅನ್ನು ನಿಷೇಧಿಸುವಂತೆ ಕೋರಿ ಬಾಂಗ್ಲಾದೇಶ ಹೈಕೋರ್ಟ್ಗೆ ಬುಧವಾರ ಅರ್ಜಿ ಸಲ್ಲಿಸಲಾಗಿದೆ. ಚಿತ್ತಗಾಂಗ್, ರಂಗುರ ನಗರಗಳಲ್ಲಿ ನಡೆಯುತ್ತಿರುವ ಅಶಾಂತಿಯನ್ನು ತಡೆಯಲು ತುರ್ತು ಪರಿಸ್ಥಿತಿಯನ್ನು ಘೋಷಿಸಬೇಕೆಂದು ಮನವಿ ಮಾಡಲಾಗಿದೆ
ಮಾನವೀಯತೆ ಮೇಲೆ ದಾಳಿ
ಬಾಂಗ್ಲಾದೇಶದಲ್ಲಿ ಹಿಂದೂ ಸಂಘಟನೆಯ ಮುಖಂಡ ಚಿನ್ಮಯ ಕೃಷ್ಣದಾಸ ಅವರನ್ನು ಬಂಧಿಸಿರುವುದಕ್ಕೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿನ್ಮಯ ಅವರ ಬಂಧನವು ಮಾನವೀಯತೆ ಮೇಲೆ ನಡೆಸಿದ ದಾಳಿ ಎಂದು ಕಟುವಾಗಿ ಹೇಳಿದ್ದಾರೆ.
ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಅವಧಿಯಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಯು, ಆ ದೇಶವು ಮೂಲಭೂತ ವಾದಿಗಳ ಹಿಡಿತದಲ್ಲಿ ಸಿಲುಕಿದೆ ಎಂಬುದನ್ನು ಪ್ರತಿಬಿಂಬಿಸುತ್ತಿದೆ. ಈ ವಿಚಾರದಲ್ಲಿ ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.