ಹೊಸದಿಲ್ಲಿ : ಬಾಂಗ್ಲಾದೇಶದಲ್ಲಿ ಇಸ್ಕಾನ್ ಚಟುವಟಿಕೆಗಳನ್ನು ನಿಷೇಧಿಸಲು ಹೈಕೋರ್ಟ್ ಗುರುವಾರ ನಿರಾಕರಿಸಿದೆ. ಇಸ್ಕಾನ್ ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಸಂದರ್ಭ ಅಟಾರ್ನಿ ಜರನಲ್ ಕಚೇರಿಯು ಸರ್ಕಾರಿ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದೆ. ಬಾಂಗ್ಲಾದೇಶದಲ್ಲಿ ಹಿಂದು ಸಂಘಟನೆಯ ಮುಖಂಡ ಚಿನ್ಮಯ ಕೃಷ್ಣ ದಾಸ ಪ್ರಭು ಅವರನ್ನು ದೇಶದ್ರೋಹದ ಆರೋಪದ ಮೇಲೆ ಬಂಧಿಸಿದ ನಂತರ ಹಿಂದು ಸಮುದಾಯದ ಮೇಲಿನ ದಾಳಿಗಳು ತೀವ್ರಗೊಂಡಿವೆ. ಇದೇ ವೇಳೆ ಇಸ್ಕಾನ್ ನಿಷೇಧಿಸುವಂತೆ ಕೋರಿ ಬಾಂಗ್ಲಾದೇಶ ಹೈಕೋರ್ಟ್ ಅರ್ಜಿ ಸ್ವೀಕರಿಸಿದ ಒಂದು ದಿನದ ನಂತರ ಈ ಆದೇಶ ನೀಡಿದೆ. ಜತೆಗೆ ಹಿಂದುಗಳ ಮೇಲೆ ದಾಳಿಯಾಗದಂತೆ, ಶಾಂತಿ-ಸುವ್ಯವಸ್ಥೆ ಕಾಪಾಡಿಕೊಳ್ಳುವಂತೆಯೂ ಕೋರ್ಟ್ ಸೂಚನೆ ನೀಡಿದೆ.
ಬಾಂಗ್ಲಾದೇಶದ ಚಿತ್ತಗಾಂಗ್ ಮತ್ತು ರಂಗ್ಪುರ ನಗರಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಪ್ಪಿಸಲು ತುರ್ತು ಪರಿಸ್ಥಿತಿ ಹೇರಲು ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿತ್ತು. ಹಾಗೆಯೇ ಇಸ್ಕಾನ್ ನಿಷೇಧಿಸಲು ನ್ಯಾಯಾಲಯಕ್ಕೆ ಇದು ಉತ್ತಮ ಸಮಯ ಎಂದು ಸಹ ಅರ್ಜಿದಾರರು ಮನವಿ ಮಾಡಿದ್ದರು.