ಹೊಸದಿಲ್ಲಿ : ಜಗತ್ತಿನಾದ್ಯಂತ ಎಲ್ಲೆಲ್ಲೂ ಭಾರತೀಯ ಸಂಸ್ಕೃತಿಯ ಛಾಪು ಮೂಡಿದೆ, ಎಲ್ಲೆಲ್ಲೂ ನಮ್ಮ ಸಂಸ್ಕೃತಿ, ಸಂಪ್ರದಾಯಗಳು ಅನುರಣಿಸುತ್ತಿದ್ದು ಕಂಗೊಳಿಸುತ್ತಿವೆ. ತಾವು ಭೇಟಿ ನೀಡಿರುವ ಪ್ರತಿಯೊಂದು ರಾಷ್ಟ್ರದಲ್ಲೂ ನಮ್ಮ ಚರಿತ್ರೆ, ಸಂಸ್ಕೃತಿ ಬಗ್ಗೆ ಅಗಾಧ ಕುತೂಹಲಾಸಕ್ತಿ, ಭಕ್ತಿಭಾವಗಳನ್ನು ಕಂಡಿದ್ದು, ನಿಜಕ್ಕೂ ಬಲು ಹೆಮ್ಮೆ ಮತ್ತು ಸಂತೋಷದ ವಿಚಾರವಿದು ಎಂದು ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.
ಆಸ್ಟ್ರಿಯಾದಲ್ಲಿ ಕಾಲೇಜು ಮಕ್ಕಳು ಅತ್ಯಂತ ಸುಶ್ರಾವ್ಯವಾಗಿ ವಂದೇಮಾತರಂ ಹಾಡಿದ್ದರು. ಪೋಲೆಂಡ್ ಮತ್ತು ಮಾಸ್ಕೋದಲ್ಲಿ ಗರ್ಭಾ ನೃತ್ಯ ಚಿತ್ತಾಕರ್ಷಕವಾಗಿತ್ತು. ಕಝನ್ (ರಷ್ಯಾ )ನಲ್ಲಿ ಧೋಲಿಡಾ, ಭೂತಾನ್‌ನಲ್ಲಿ ದಾಂಡಿಯಾ ರಾಸ್, ಸಿಂಗಾಪುರದಲ್ಲಿ ಭರತನಾಟ್ಯ, ಲಾವೋಸ್ ಮತ್ತು ಬ್ರೆಜಿಲ್‌ನಲ್ಲಿ ರಾಮಾಯಣ ಕಥಾನಕಗಳು ಅತ್ಯಂತ ಮನಸ್ಪರ್ಶಿಯಾಗಿ ಪ್ರದರ್ಶಿಸಲ್ಪಟ್ಟುವು
ಪ್ರತಿಯೊಂದು ಕಾರ್ಯಕ್ರಮಗಳು ಅತ್ಯಂತ ಚಿತ್ತಾಕರ್ಷಕವಾಗಿ ಮೂಡಿಬಂದಿದ್ದವು ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. ನೃತ್ಯ ನಾಟಕಗಳ ಫೋಟೋಗಳನ್ನೂ ಎಕ್ಸ್‌ನಲ್ಲಿ ಶೇರ್ ಮಾಡಿದ್ದಾರೆ.
ಭೂತಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಂಡಾಡುವ ಜಾನಪದ ಗೀತೆಯನ್ನು ಜನರು ಹಾಡಿದ್ದರು. ಇದು ವಿದೇಶಗಳಲ್ಲಿ ಅಥವಾ ಜಗತ್ತಿನಾದ್ಯಂತ ಭಾರತೀಯ ಸಂಸ್ಕೃತಿ, ಸಂಪ್ರದಾಯಗಳ ಬಗ್ಗೆ ಜನರಿಗಿರುವ ಅಪೂರ್ವ ಪ್ರೀತಿ ಗೌರವಗಳಿಗೆ ಸಾಕ್ಷಿ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.