ಕೋಟ : ತೆಕ್ಕಟ್ಟೆ ಮಲ್ಯಾಡಿಯಿಂದ ಮೂಡುಗಿಳಿಯಾರು-ಕಾರ್ಕಡ-ಕಾವಡಿ ಮಾರ್ಗವಾಗಿ ಹರಿಯುವ ಈ ಭಾಗದ ರೈತರ ಜೀವನಾಡಿಯಾಗಿರುವ ಸೂಲಡ್ಡು-ಮಡಿವಾಳಸಾಲು ಹೊಳೆ ಹೂಳೆತ್ತುವ ಯೋಜನೆಗೆ ಶೀಘ್ರ ಆರ್ಥಿಕ ನೆರವನ್ನು ನೀಡಿ ಕಾಮಗಾರಿಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಳಕರ್ ಅವರಿಗೆ ಕೋಟ ರೈತಧ್ವನಿ ಸಂಘಟನೆಯ ನಿಯೋಗ ಉಡುಪಿಯಲ್ಲಿ ಕೋರಿಕೆ ಸಲ್ಲಿಸಿತು.
ಹಿಂದೊಮ್ಮೆ ಈ ಬಗ್ಗೆ ಮನವಿ ಸಲ್ಲಿಸಿದಾಗ ಹೊಳೆ ಹೂಳೆತ್ತುವ ಕಾಮಗಾರಿಯ ಯೋಜನಾ ವರದಿ ಸಿದ್ದಪಡಿಸಲು ಸೂಚನೆ ನೀಡುವುದಾಗಿ ಉಸ್ತುವಾರಿ ಸಚಿವರು ಭರವಸೆ ನೀಡಿದ್ದರು. ಅದರಂತೆ ಯೋಜನಾ ವರದಿ ಬಗ್ಗೆ ಚರ್ಚಿಸಲಾಯಿತು ಹಾಗೂ ಅನುದಾನ ಬಿಡುಗೆಡೆಗೆ ಕ್ರಮಕೈಗೊಳ್ಳಬೇಕು ಎಂದು ಕೋರಲಾಯಿತು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಮತ್ತು ನೀರಾವರಿ ಸಚಿವರಾದ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಿಕ್ರಮಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು ಮತ್ತು ಬೆಳಗಾವಿಯಲ್ಲಿನಡೆಯುವ ಅಧಿವೇಶನದ ಸಂದರ್ಭ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳನ್ನು ಖುದ್ದಾಗಿ ರೈತಧ್ವನಿ ನಿಯೋಗಕ್ಕೆ ಭೇಟಿ ಮಾಡಿಸುವುದಾಗಿ ಭರವಸೆ ನೀಡಿದರು. ಕೋಟ ರೈತಧ್ವನಿ ಅಧ್ಯಕ್ಷಜಯರಾಮ ಶೆಟ್ಟಿ ಪ್ರಮುಖರಾದ ಟಿ.ಮಂಜುನಾಥ ಹಾಗೂ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.