ನಾಗ್ಪುರ : ಸಮಾಜದ ಜನಸಂಖ್ಯೆ ಬೆಳವಣಿಗೆ ದರ 2.1ಕ್ಕಿಂತಲೂ ಕಡಿಮೆಯಾದಲ್ಲಿ ಆ ಸಮಾಜ ತನ್ನಿಂತಾನೆ ನಾಶವಾಗುವುದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗ್ವತ್ ಎಚ್ಚರಿಸಿದ್ದಾರೆ. ತನ್ಮೂಲಕ ಜನಸಂಖ್ಯೆ ಬೆಳವಣಿಗೆಯ ಮಹತ್ತ್ವವನ್ನು ಸಾರಿದ್ದಾರೆ.
ನಾಗುರದಲ್ಲಿ ಕಥಾಳೆ ಕುಲ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅವರು, ಕುಟುಂಬವು ಸಮಾಜದ ಭಾಗ ಮತ್ತು ಪ್ರತಿಯೊಂದು ಕುಟುಂಬ ಕೂಡ ಒಂದು ಘಟಕವಿದ್ದಂತೆ. ಸಮಾಜದ ಜನಸಂಖ್ಯೆ ತೀರಾ ಕಡಿಮೆಯಾಗುತ್ತಿರುವುದು ತೀರಾ ಕಳವಳಕಾರಿ ಎಂದರು.
ಜನಸಂಖ್ಯೆ ಬೆಳವಣಿಗೆ ದರ 2.1ಕ್ಕಿಂತ ಕಡಿಮೆಯಾದಲ್ಲಿ ಆ ಸಮಾಜ ಉಳಿಯದು. ಅದನ್ನು ಬೇರೆಯವರು ನಾಶ ಮಾಡಬೇಕೆಂದಿಲ್ಲ ಅದು ಅದಾಗೇ ನಾಶವಾಗುವುದು ಎಂದು ಲೋಕಸಂಖ್ಯಾ ಶಾಸ್ತ್ರ ಹೇಳುತ್ತದೆ ಎಂದು ಎಚ್ಚರಿಸಿದರು
. 1998 ಅಥವಾ 2002ರ ಜನಸಂಖ್ಯಾ ನೀತಿ ಕೂಡ ಸಮಾಜದ ಜನಸಂಖ್ಯೆ ಬೆಳವಣಿಗೆ ದರ 2.1ಕ್ಕಿಂತ ಕಡಿಮೆಯಾಗಕೂಡದು ಎಂದು ಹೇಳಿದೆ. ಅಂದರೆ ಜನಸಂಖ್ಯಾ ಬೆಳವಣಿಗೆ ದರ 2ಕ್ಕಿಂತ ಅಧಿಕ ಅಥವಾ ಮೂರಾಗಬೇಕು ದಂಪತಿಗೆ ಕನಿಷ್ಠ 3 ಮಕ್ಕಳು ಬೇಕು. ಜನಸಂಖ್ಯಾ ವಿಜ್ಞಾನ ಇದನ್ನೇ ಪ್ರತಿಪಾದಿಸಿದೆ. ಸಮಾಜ ಉಳಿಯಬೇಕಾದರೆ ಈ ಸಂಖ್ಯೆಯನ್ನು ಕಾಯ್ದುಕೊಳ್ಳುವುದು ಮುಖ್ಯ ಎಂದು ಭಾಗ್ವತ್ ಒತ್ತಿ ಹೇಳಿದರು.