ಕೋಟ : ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾರಂಗ ವಡ್ಡರ್ಸೆ ಇವರ ನೇತೃತ್ವದಲ್ಲಿ ಚಿಣ್ಣರ ಯಕ್ಷ ಪ್ರತಿಭಾವಿಲಾಸದ ಏಳನೇ ವರ್ಷದ ಚಿಣ್ಣರ ಒಡ್ಡೋಲಗ ಭಾನುವಾರ ಸಂಪನ್ನಗೊಂಡಿತು. ಓ.ಎನ್.ಜಿ.ಸಿ.ಮುಂಬೈ ಇದರ ನಿವೃತ್ತ ಚೀಪ್ ಮೆನೇಜರ್ ಬನ್ನಾಡಿ ನಾರಾಯಣ ಆಚಾರ್ಯ ಚಿಣ್ಣರ ಒಡ್ಡೋಲಗ ಉದ್ಘಾಟಿಸಿದರು. ಕಲಾರಂಗದ ಅಧ್ಯಕ್ಷ ಸಚಿನ್ ಶೆಟ್ಟಿ ಸಭಾಧ್ಯಕ್ಷತೆ ವಹಿಸಿದ್ದರು. ದೇವಳದ ಧರ್ಮದರ್ಶಿ ನ್ಯಾಯವಾದಿ ಕೊತ್ತಾಡಿ ಉದಯ ಕುಮಾರ್ ಶೆಟ್ಟಿ ಶುಭ ಹಾರೈಸಿದರು. ಸಭೆಯಲ್ಲಿ ಯಕ್ಷಗುರುಗಳಾದ ಪ್ರಸಾದ್‌ಕುಮಾರ್ ಮೊಗೆಬೆಟ್ಟು ಹಾಗೂ ದೇವದಾಸ್ ರಾವ್ ಕೂಡ್ಲಿ ಉಪಸ್ಥಿತರಿದ್ದರು.ಇದೇ ವೇಳೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾನಿಧಿಯನ್ನು ನೀಡಲಾಯಿತು. ರಂಗಜೀವನದಲ್ಲಿ ಅಂಗವೈಕಲ್ಯವನ್ನು ಕಲಾ ಸಾಧನೆಯಮೂಲಕ ಮೆಟ್ಟಿನಿಂತ ಮದ್ದಳೆಗಾರ ವಿಜಯನಾಯ್ಕ ನೀರ್ಜೆಡ್ಡು ಇವರನ್ನು ಸಂಸ್ಥೆಯು ಕಲಾನಿಧಿದೊಂದಿಗೆ ಗೌರವಪೂರ್ವಕವಾಗಿ ಸಮ್ಮಾನಿಸಲಾಯಿತು. ಕಲಾರಂಗದ ಜೊತೆ ಕಾರ್ಯದರ್ಶಿ ಪದ್ಮನಾಭ ಆಚಾರ್ಯ ಬನ್ಮಾಡಿ ಸ್ವಾಗತಿಸಿದರು.ಕಾರ್ಯದರ್ಶಿ ಪಿಡಿಓ ಸತೀಶ್ ವಡ್ಡರ್ಸೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸದಸ್ಯ ಮಂಜುನಾಥ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು.ಗಣೇಶ್ ಐತಾಳ್ ಧನ್ಯವಾದಗೈದರು. ಶಿಕ್ಷಕ ಸತೀಶ್ ಪೂಜಾರಿ ನಿರೂಪಣೆಗೈದರು .ಆ ಬಳಿಕ ಬಾಲಕಲಾವಿದರ ಪ್ರಸ್ತುತಿಯಲ್ಲಿ ಪ್ರಸಾದ್‌ಕುಮಾರ್ ಮೊಗೆಬೆಟ್ಟು ರಚನೆಯ ಪೌರಾಣಿಕ ಪ್ರಸಂಗ- ‘ಸರ್ಪ ಸುಪರ್ಣ’ ಪ್ರದರ್ಶನಗೊಂಡಿತು.