ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿನ ಬಣ ರಾಜಕೀಯದ ವಿಚಾರದಲ್ಲಿ ಹೈಕಮಾಂಡ್ ಕೊನೆಗೂ ಮಧ್ಯೆ ಪ್ರವೇಶಿಸಿದ್ದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಿದೆ.
ಈ ನೋಟಿಸ್ ತಲುಪಿದ 10 ದಿನಗಳೊಳಗಾಗಿ ಉತ್ತರ ನೀಡಬೇಕು ನಿಗದಿತ ಅವಧಿಯೊಳಗೆ ಉತ್ತರ ನೀಡದಿದ್ದರೆ ನಿಮ್ಮಿಂದ ಯಾವುದೇ ಉತ್ತರ ಬಂದಿಲ್ಲವೆಂದು ಪರಿಗಣಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಿಸ್ತು ಕ್ರಮದ ಎಚ್ಚರಿಕೆ ಕೊಟ್ಟಿದೆ. ಭಾನುವಾರ ಬಿಜೆಪಿಯ ಕೇಂದ್ರೀಯ ಶಿಸ್ತು ಸಮಿತಿ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ಅವರು ಯತ್ನಾಳ್ ಅವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಶುಕ್ರವಾರ ದೆಹಲಿಯಲ್ಲಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಯತ್ನಾಳ್ ಅವರು ಪಕ್ಷದ ನಾಯಕತ್ವದ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡುವ ಮೂಲಕ ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಇದರಿಂದ ಪಕ್ಷ ಸಂಘಟನೆಗೆ ಮತ್ತು ವರ್ಚಸ್ಸಿಗೆ ಧಕ್ಕೆ ಉಂಟಾಗುತ್ತಿದೆ ಎಂದು ವಿವರಿಸಿದ್ದರು. ಅದರ ಬೆನ್ನಲ್ಲೇ ಭಾನುವಾರ ನೋಟಿಸಿನ ಆಸ್ತ ಪ್ರಯೋಗವಾಗಿದೆ.