ಬೆಂಗಳೂರು : ಬೆಂಗಳೂರು, ತಮಿಳುನಾಡು, ಕೊಡಗು, ದಕ್ಷಿಣ ಕನ್ನಡ, ಕೇರಳದ ಎರ್ನಾಕುಲಂ ಸೇರಿ ದೇಶದ 16 ಕಡೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ ಐಎ) ಗುರುವಾರ ಬೆಳಗ್ಗೆ ಏಕಕಾಲದಲ್ಲಿ ದಾಳಿ ನಡೆಸಿದೆ. ಎರಡು ವರ್ಷಗಳ ಹಿಂದೆ ಭಾರೀ ಸಂಚಲನ ಮೂಡಿಸಿದ್ದ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿದ ಹಂತಕರು ಈ ಪ್ರದೇಶದ ಕೆಲ ವ್ಯಕ್ತಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದರು ಎಂಬ ಶಂಕೆ ಹಿನ್ನೆಲೆಯಲ್ಲಿ ಎನ್‌ಐಎ ದಾಳಿ ನಡೆಸಿದೆ ಎನ್ನಲಾಗಿದೆ.
ಆರೋಪಿಗಳು ವಿದೇಶಗಳಲ್ಲಿ ನೆಲೆಸಿದ್ದು ಅಲ್ಲಿಂದ ಅವರು ತಮ್ಮ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ ಎಂದು ಎನ್‌ಐಎ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ ಎನ್ ಐಎ ಶಂಕಿತ ಹಂತಕರೊಂದಿಗೆ ನಿರಂತರ ಸಂಪರ್ಕದಲ್ಲಿರುವ ವ್ಯಕ್ತಿಗಳ ನಿವಾಸ ಮತ್ತು ಆಸ್ತಿಗಳ ಮೇಲೆ ದಾಳಿ ನಡೆಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿಯ ಒಂದು ಮನೆ ಹಾಗೂ ಬೆಳ್ತಂಗಡಿ, ಸುಳ್ಯ ಹಾಗೂ ಕೆಯ್ಯರು ಮೂಲದ ವ್ಯಕ್ತಿಗಳ ಮನೆಯಲ್ಲಿ ಎನ್‌ಐಎ ತಲಾಶ್ ನಡೆಸಿದೆ. ಹಂತಕರಲ್ಲಿ ಒಬ್ಬನಾದ ಆರೋಪಿ ನೌಶಾದ್ ಮನೆ ಕೆಯ್ಯರಿನಲ್ಲಿದ್ದು, ಆತನ ಮನೆ ಮೇಲೆ ‘ದಾಳಿ ನಡೆಸಿದ ಎನ್‌ಐಎ ಅಧಿಕಾರಿಗಳು, ಆತನ ತಾಯಿ ತುಲೈಕಾ ಹಾಗೂ ಸಹೋದರಿ ತಫಾ ಅವರನ್ನು ವಿಚಾರಣೆಗೆ ಒಳಪಡಿಸಿದರು. ಬೆಳ್ತಂಗಡಿಯ ಕುವೆಟ್ಟು ಗ್ರಾಮದ ಮದ್ದಡ್ಕಕ್ಕೆ ಆಗಮಿಸಿದ ಎನ್‌ಐಎ ತಂಡ ಆರೋಪಿಗಾಗಿ ಹುಡುಕಾಟ ನಡೆಸಿದೆ