ಉಡುಪಿ : ಕರಾವಳಿ ಜಿಲ್ಲೆಯ ಜನಜೀವನದ ಜೀವನಾಡಿ ರಾಷ್ಟ್ರೀಯ ಹೆದ್ದಾರಿ 66 ರ ಮೂಲ ಡಿಸೈನ್ ನಲ್ಲಿ ಆಗಿರುವ ಲೋಪದೋಷಗಳಿಂದ ಪ್ರಯಾಣಿಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ಮಂಗಳೂರಿನ ನಂತೂರು ಜಂಕ್ಷನ್ ಸೇರಿದಂತೆ ಉಡುಪಿಯ ಅಂಬಲ್ಪಾಡಿಯ ಮೇಲ್ಸೇತುವೆ ಕಟಪಾಡಿ, ಬ್ರಹ್ಮಾವರದ ಆಕಾಶವಾಣಿಯ ತಿರುವಿನ ಅಂಡರ್ ಪಾಸ್ ನ ಸಮಸ್ಯೆ ಇವುಗಳೆಲ್ಲದರ ಪೂರ್ಣ ಅಧ್ಯಯನ ಮತ್ತು ಪರಿಹಾರಕ್ಕಾಗಿ ಉನ್ನತ ಮಟ್ಟದ ತಜ್ಞ ಇಂಜಿನಿಯರ್ ಗಳ ಸಮಿತಿಯೊಂದನ್ನು ರಚಿಸಿ NH. 66 ರ ಬಗ್ಗೆ ಅಧ್ಯಯನ ನಡೆಸಿ ಅವೈಜ್ಞಾನಿಕವಾಗಿ ನಿರ್ಮಾಣಗೊಂಡ ಚಹರೆಗಳನ್ನು ಪುನರ್ ನಿರ್ಮಿಸಬೇಕೆಂದು ಉಡುಪಿ ಚಿಕ್ಕಮಗಳೂರು ಸಂಸದರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಕೇಂದ್ರ ಭೂ ಸಾರಿಗೆ ಸಚಿವ ಶ್ರೀ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದರು.
ಅಫಘಾತಗಳು ಸೇರಿದಂತೆ ವಾಹನ ಒತ್ತಡಗಳ ಸ್ಥಳವನ್ನು ಪರಿಶೀಲಿಸಿ ಸಂಪೂರ್ಣ ವಿಡಿಯೋ ರೆಕಾರ್ಡ್ ಮಾಡಿ ವರದಿ ಸಲ್ಲಿಸುವಂತೆ ಸ್ಥಳದಲ್ಲಿರುವ ಅಧಿಕಾರಿಗಳಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಆದೇಶ ನೀಡಿದರು.
ಬ್ರಹ್ಮಾವರ, ಕೋಟ, ಕುಂದಾಪುರ ರಸ್ತೆ ದುರಸ್ತಿಯ ಬಗ್ಗೆಯೂ ಸಚಿವರ ಗಮನಕ್ಕೆ ತರಲಾಯಿತು. ಕಲ್ಯಾಣಪುರ – ಸಂತೆಕಟ್ಟೆ ಮತ್ತು ಮಣಿಪಾಲದ ಇಂದ್ರಾಳಿ ಮೇಲ್ಸೇತುವೆ ಕಾಮಗಾರಿ ಚುರುಕಾಗಿ ನಡೆಸಲು ಅಧಿಕಾರಿಗಳಿಗೆ ಸೂಚಿಸಿದರು.
ಕರ್ನಾಟಕ ರಾಜ್ಯ ಮತ್ತು ಕರಾವಳಿ ರಸ್ತೆಗಳ ಸುಧಾರಣೆಗಾಗಿ (CRF) ಸೆಂಟ್ರಲ್ ರೋಡ್ ಫಂಡ್ ನಿಂದ ರಾಜ್ಯಕ್ಕೆ ಅನುದಾನ ನೀಡುವುದಾಗಿ ಸಚಿವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ಬ್ರಿಜೇಶ್ ಚೌಟ, ಶ್ರೀ ಮಲ್ಲೇಶ್, ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ, ಉದ್ಯಮಿ ಜಿ ಶಂಕರ್ ಬಿಜೆಪಿ ಮುಖಂಡರಾದ ಸುರೇಶ್ ನಾಯಕ್ ಮುಂತಾದವರಿದ್ದರು.