ಬೆಂಗಳೂರು : ಚಾಮರಾಜನಗರ ರಾಜ್ಯ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಹುದ್ದೆ ಹಂಚಿಕೆ ಒಪ್ಪಂದದ ಕುರಿತು ಜಟಾ ಪಟ ನಡೆಯುತ್ತಿರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ನಾನೀಗ ರಾಜಕೀಯದ ಅಂತ್ಯ ಕಾಲದಲ್ಲಿದ್ದೇನೆ’ ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಮತ್ತಷ್ಟು ಬಿಸಿಬಿಸಿ ಚರ್ಚೆಗೆ ಎಡೆ ಮಾಡಿಕೊಟ್ಟಿದ್ದಾರೆ. ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದಲ್ಲಿ ಶನಿವಾರ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತನಾಡುತ್ತಿದ್ದರು.
ಆಗ ಅಭಿಮಾನಿಯೊಬ್ಬ ‘ಮುಂದೆ ಮೂರನೇ ಬಾರಿಯೂ ನೀವೇ ಮುಖ್ಯ ಮಂತ್ರಿ ಆಗುತ್ತೀರಿ’ ಎಂದು ಕೂಗಿದ. ಇದಕ್ಕೆ ಭಾಷಣದಲ್ಲಿಯೇ ಪ್ರತಿಕ್ರಿಯಿಸಿದ ಸಿಎಂ, ‘ನೋಡೋಣ, ನಿಮ್ಮ ಆಸೆ. ಆದರೆ, ನಾನೀಗ ರಾಜಕೀಯದ ಕೊನೆಗಾಲದಲ್ಲಿದ್ದೇನೆ. ಜನರ ಅಭಿಮಾನ ಬಹಳ ಮುಖ್ಯ. ಜನರ ಪ್ರೀತಿ ಅಭಿಮಾನವನ್ನು ಗಳಿಸದೆ ಹೋದರೆ ರಾಜಕೀಯದಲ್ಲಿ ಉಳಿಯಲು ಸಾಧ್ಯವಿಲ್ಲ’ ಎಂದು ಮಾರ್ಮಿಕವಾಗಿ ಹೇಳಿದರು.
ಸಿಎಂ ಸ್ಥಾನ ಗಟ್ಟಿಯಾಯಿತು :
ಚಾಮರಾಜನಗರಕ್ಕೆ ಭೇಟಿ ನೀಡಿದರೆ ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಳ್ಳುತ್ತಾರೆಂಬ ಕಳಂಕ ಹೊರಿಸಲಾಗಿತ್ತು. ಆದರೆ, ನಾನು ಸುಮಾರು 20 ಬಾರಿ ಭೇಟಿ ನೀಡಿದ್ದು, ಮುಖ್ಯಮಂತ್ರಿ ಸ್ಥಾನ ಹೋಗುವ ಬದಲು ಇನ್ನೂ ಗಟ್ಟಿಯಾಯಿತು. ನಾನು ಮೌಡ್ಯವನ್ನು ನಂಬುವುದಿಲ್ಲ ಎಂದರು.