ಬಳ್ಳಾರಿ : ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವಿನ ಪ್ರಕರಣ ಭಾರೀ ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಲೋಕಾಯುಕ್ತ ಅಧಿಕಾರಿಗಳು ಬಳ್ಳಾರಿ ಜಿಲ್ಲಾಸ್ಪತ್ರೆ ಹಾಗೂ ಬಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ವ್ಯಾಪಕ ಪರಿಶೀಲನೆ ನಡೆಸಿದ್ದಾರೆ.
ಬಾಣಂತಿಯರ ಸರಣಿ ಸಾವು ಸಂಬಂಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಮುಖ್ಯ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಆದೇಶದನ್ವಯ, ಲೋಕಾಯುಕ್ತ ಅಧಿಕಾರಿಗಳು ಬಳ್ಳಾರಿ ಜಿಲ್ಲಾಸ್ಪತ್ರೆ ಹಾಗೂ ಬಿಮ್ಸ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಮಧ್ಯೆ ವಿವಾದ ಸರ್ಕಾರದ ವರ್ಚಸ್ಸಿಗೆ ಭಂಗ ತರುವತ್ತ ಸಾಗುತ್ತಿದ್ದಂತೆಯೇ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬಳ್ಳಾರಿಗೆ ಧಾವಿಸಿ ಬಂದಿದ್ದು ಜಿಲ್ಲಾಸ್ಪತ್ರೆ ಹಾಗೂ ಬಿಮ್ಸ್ ಆಸ್ಪತ್ರೆಗೆ ಭೇಟಿ ಕೊಟ್ಟು ಬಾಣಂತಿಯರ ಸಾವಿನ ಕುರಿತಾದ ಸಮಗ್ರ ಮಾಹಿತಿ ಪಡೆದಿದ್ದಾರೆ. ಅಂತೆಯೇ ಸಾವಿಗೀಡಾದ ಬಾಣಂತಿಯರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರಲ್ಲದೇ ಸರ್ಕಾರದಿಂದ ಎಲ್ಲ ನೆರವು ಒದಗಿಸುವ ಭರವಸೆ ನೀಡಿದ್ದಾರೆ.
ಇನ್ನು ಬಾಣಂತಿಯರ ಸಾವುಗಳು ಅವ್ಯಾಹತವಾಗಿ ಮುಂದುವರಿದಿದ್ದರೂ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿ, ಆರೋಗ್ಯ ಸಚಿವರ ಭೇಟಿ ಮತ್ತು ಮೃತಪಟ್ಟವರಿಗೆ ಯೋಗ್ಯ ಪರಿಹಾರದ ಬೇಡಿಕೆ ಮುಂದಿಟ್ಟು ಬಿಜೆಪಿ ಮಾಜಿ ಸಚಿವ ಬಿ.ಶ್ರೀರಾಮುಲು ಶನಿವಾರ ಆರಂಭಿಸಿದ್ದ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಸಂಜೆ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ ಸೂಕ್ತ ತನಿಖೆಯ ಭರವಸೆ ನೀಡಿದ ಹಿನ್ನೆಲೆಯಲ್ಲಿ ಅವರು ಉಪವಾಸ ಕೈಬಿಟ್ಟಿದ್ದಾರೆ.