ಬೆಳಗಾವಿ : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಂಚಮಸಾಲಿ ಸಮಾಜಕ್ಕೆ ‘2ಎ’ ಮೀಸಲಾತಿ ಕೊಡದೇ ಇದ್ದರೆ ಏನಂತೆ ಮುಂದೆ ಇನ್ನೊಬ್ಬ ಮುಖ್ಯಮಂತ್ರಿ ಬರುತ್ತಾರೆ. ಅವರಿಂದಲೇ ನಾವು ಮೀಸಲಾತಿ ಪಡೆಯುತ್ತೇವೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ತಿರುಗೇಟು ನೀಡಿದ್ದಾರೆ.
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ವಿಷಯವಾಗಿ ಸುವರ್ಣಸೌಧದ ಎದುರು ನಡೆದ ಪ್ರತಿಭಟನೆ ವೇಳೆ ನಡೆದ ಲಾಠಿಚಾರ್ಜ್ ವಿರೋಧಿಸಿ ಗುರುವಾರ ಇಲ್ಲಿಯ ಜ್ಯೂಬಿಲಿ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪಂಚಮಸಾಲಿ ಹೋರಾಟ ಅಸಂವಿಧಾನಿಕ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸ್ವಾಮೀಜಿ, ನಮ್ಮ ಬೇಡಿಕೆ ಸಂವಿಧಾನ ಬದ್ದವಾಗಿದೆ. ಆದರೆ, ಮುಖ್ಯಮಂತ್ರಿಯವರು ನಮ್ಮ ಬೇಡಿಕೆಯೇ ಸಂವಿಧಾನ ವಿರೋಧಿ ಎಂದಿದ್ದು ಖಂಡನೀಯ. ಡಾ.ಬಿ.ಆರ್. ಅಂಬೇಡ್ಕರ್ ಅವರು ಬರೀ ಇವರ ಸ್ವತ್ತಲ್ಲ. ಅಂಬೇಡ್ಕರ್ ಹಾಗೂ ಅವರ ಸಂವಿಧಾನ ನಮಗೂ ಅನ್ವಯ ಆಗುತ್ತದೆ ಎಂದು ನುಡಿದರು