ಪ್ರಯಾಗ್ ರಾಜ್ : 12 ವರ್ಷಗಳ ಬಳಿಕ ಗಂಗಾ, ಯಮುನಾ ಹಾಗೂ ಸರಸ್ವತಿ ಸಂಗಮಿಸುವ ಪವಿತ್ರ ತಾಣವಾದ ಪ್ರಯಾಗ್ ರಾಜ್ ನಲ್ಲಿ ಮಹಾಕುಂಭ ಮೇಳ-2025 ನಡೆಯುತ್ತಿರುವುದು ದೇಶದ ‘ಏಕತೆಯ ಮಹಾ ಯಜ್ಞವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಶುಕ್ರವಾರ ಪ್ರಯಾಗ್ ರಾಜ್ ಸಂಗಮ ನಗರದಲ್ಲಿ ಮಹಾಕುಂಭ ಮೇಳದ ಅಂಗವಾಗಿ 5,500 ಕೋಟಿ ರೂ. ಮೌಲ್ಯದ 167 ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದರು
ಪ್ರಯಾಗ್ ರಾಜ್ ಕೇವಲ ಭೌಗೋಳಿಕ ಸ್ಥಳವಲ್ಲ. ಇದು ದೇಶದ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಗುರುತನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ತಾಣವಾಗಿದೆ. ಇಲ್ಲಿ ನಡೆಯುವ ಮಹಾಕುಂಭ ಮೇಳದಿಂದ ಜಾತಿ ಹಾಗೂ ಪಂಗಡಗಳ ವ್ಯತ್ಯಾಸ ಕಣ್ಮರೆಯಾಗಲು ಸಾಧ್ಯ ಎಂದು ಒತ್ತಿ ಹೇಳಿದರು.
ಮಹಾಕುಂಭ ಮೇಳ ವಿಶ್ವದ ಅತೀ ದೊಡ್ಡ ಆಯೋಜನೆಯಾಗಿದ್ದು ಕೋಟ್ಯಂತರ ಭಕ್ತರಿಗೆ ಸ್ವಾಗತ ಹಾಗೂ ಸೇವೆ ಮಾಡುವ ಪುಣ್ಯ ಕಾರ್ಯವಾಗಿದೆ. 50 ದಿನ ಮಹಾಯಾಗ ಮಾಡುವ ಮೂಲಕ ಹೊಸ ಇತಿಹಾಸ ಸೃಷ್ಟಿಯಾಗಲಿದೆ ಎಂದು ಹೇಳಿದರು. ಪ್ರಯಾಗ್ ರಾಜ್ ಮೂರು ನದಿಗಳ ಸಂಗಮವಾಗುವ ಕ್ಷೇತ್ರ ಅಷ್ಟೇ ಅಲ್ಲ ದೇಶದ ಪವಿತ್ರ ಹಾಗೂ ತೀರ್ಥ ಕ್ಷೇತ್ರವಾಗಿದೆ. ಗಂಗಾ, ಯಮುನಾ, ಕಾವೇರಿ, ನರ್ಮದಾಗಳಂತಹ ಪವಿತ್ರ ನದಿಗಳ ಹೊಂದಿರುವ ದೇಶ ಭಾರತ ಇದರ ಮಹತ್ವ ಹಾಗೂ ಮಹಾತ್ಮೆಯನ್ನು ಅರಿತುಕೊಳ್ಳಬೇಕು. ಸಂಗಮ, ಸಮುಚ್ಚಯ, ಯೋಗ, ಸುಯೋಗ, ಪ್ರಭಾವ ಎಲ್ಲವೂ ಪ್ರಯಾಗವಾಗಿದೆ ಎಂದು ತಿಳಿಸಿದರು
ತ್ರಿವೇಣಿ ಸಂಗಮದಲ್ಲಿ ನಮೋ ಪೂಜೆ
ಪ್ರಯಾಗ್‌ರಾಜ್‌ಗೆ ಶುಕ್ರವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಗಂಗಾ, ಯಮುನಾ, ಸರಸ್ವತೀ ನದಿಗಳ ಪವಿತ್ರ ಸಂಗಮ ಸ್ಥಾನ ತ್ರಿವೇಣಿ ಸಂಗಮದಲ್ಲಿ ಪೂಜೆ ಸಲ್ಲಿಸಿದರು. ಪೂಜೆಗೆ ಮುನ್ನ ನದಿ ವಿಹಾರ ಮಾಡಿದರು.
ಅಕ್ಷಯ ವಟವೃಕ್ಷಕ್ಕೆ ಪೂಜೆ:
ಹನುಮಾನ್ ಮಂದಿರ ಮತ್ತು ಸರಸ್ವತಿ ಕೂಪಕ್ಕೆ ಭೇಟಿ ನೀಡುವ ಮುನ್ನ ಅಕ್ಷಯ ವಟವೃಕ್ಷಕ್ಕೆ ಪ್ರಧಾನಿ ಮೋದಿ ಪೂಜೆ ಸಲ್ಲಿಸಿದರು. ಮಹಾಕುಂಭ ವಸ್ತುಪ್ರದರ್ಶನ ಜಾಗಕ್ಕೆ ಭೇಟಿ ನೀಡಿ ಅಧಿಕಾರಿಗಳ ಜತೆ ಮಾತುಕತೆ ನಡೆಸಿದರು. ಪ್ರಯಾಗ್‌ರಾಜ್‌ನಲ್ಲಿ 2025ರ ಮಹಾಕುಂಭ ಮೇಳವು ಪೌಷ ಪೌರ್ಣಮಿಯಂದು ಅಂದರೆ ಜ.13ರಿಂದ ವಿಧ್ಯುಕ್ತವಾಗಿ ಆರಂಭವಾಗಿ, ಮಹಾಶಿವರಾತ್ರಿಯ ಫೆ.26ರವರೆಗೆ ಸಂಪನ್ನಗೊಳ್ಳಲಿದೆ. ಪ್ರತೀ 12 ವರ್ಷಕ್ಕೊಮ್ಮೆಇದು ನಡೆಯುತ್ತದೆ