ಹೊಸದಿಲ್ಲಿ : ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಪ್ರತಿಪಕ್ಷಗಳ ಅವಿಶ್ವಾಸ ಗೊತ್ತುವಳಿ ವಿಚಾರವಾಗಿ ರಾಜ್ಯಸಭೆಯಲ್ಲಿ ಭಾರೀ ಗದ್ದಲ ಉಂಟಾಗಿದೆ. ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯದ ಕುರಿತು ಸಭಾಪತಿ ಜಗದೀಪ್ ಧನ್ವರ್ ಮತ್ತು ಮಲ್ಲಿಕಾರ್ಜುನ ಖರ್ಗೆ ನಡುವೆ ತೀವ್ರ ವಾಗ್ವಾದ ನಡೆಯಿತು.
ನಾನು ರೈತನ ಮಗ ನಾನು ದೌರ್ಬಲ್ಯವನ್ನು ತೋರಿಸುವುದಿಲ್ಲ. ನಾನು ನನ್ನ ದೇಶಕ್ಕಾಗಿ ನನ್ನ ಜೀವನವನ್ನು ತ್ಯಾಗ ಮಾಡುತ್ತೇನೆ. ನಿಮಗೆ (ಪ್ರತಿಪಕ್ಷಗಳಿಗೆ) ದಿನದ 24 ಗಂಟೆಯೂ ಒಂದೇ ಕೆಲಸವಿದೆ ರೈತನ ಮಗ ಇಲ್ಲಿ ಏಕೆ ಕುಳಿತಿದ್ದಾನೆ ? ನಾನು ಬಹಳಷ್ಟು ಸಹಿಸಿಕೊಂಡಿದ್ದೇನೆ… ನಿಮಗೆ ಗೊತ್ತುವಳಿ ಮಂಡಿಸುವ ಹಕ್ಕಿದೆ, ಆದರೆ ನೀವು ಸಂವಿಧಾನವನ್ನು ಅವಮಾನಿಸುತ್ತಿದ್ದೀರಿ ಎಂದು ಧನ್ವರ್ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ನೀವು ರೈತನ ಮಗನಾಗಿದ್ದರೆ, ನಾನು ಕೂಡ ಕಾರ್ಮಿಕರ ಮಗ, ನಿಮ್ಮ ಹೊಗಳಿಕೆಯನ್ನು ಕೇಳಲು ನಾವು ಇಲ್ಲಿಲ್ಲ. ನೀವು ಆ ಕಡೆಯ ಎಲ್ಲರಿಗೂ (ಆಡಳಿತ ಪಕ್ಷದ ಸದಸ್ಯರು) ಮಾತನಾಡಲು ಅವಕಾಶ ನೀಡುತ್ತಿದ್ದೀರಿ, ನೀವು ಅವರಿಗೆ ನಮ್ಮ ಪಕ್ಷವನ್ನು ಅವಮಾನಿಸಲು ಅವಕಾಶ ನೀಡುತ್ತಿದ್ದೀರಿ… ಸದನವನ್ನು ನಡೆಸುವ ಜವಾಬ್ದಾರಿ ನಿಮಗೆ ಇದೆ ಆದರೆ ನೀವು ಉದ್ದೇಶಪೂರ್ವಕವಾಗಿ ಅವರನ್ನು (ಬಿಜೆಪಿ ಸದಸ್ಯರನ್ನು) ಪ್ರೋತ್ಸಾಹಿಸುತ್ತಿದ್ದೀರಿ ಎಂದು ದೂಷಿಸಿದರು.