ನವದೆಹಲಿ : ಖ್ಯಾತ ತಬಲಾ ವಿದ್ವಾಂಸ, ಸಂಗೀತ ಮಾಂತ್ರಿಕ ಹಾಗೂ ವಿಶ್ವಾದ್ಯಂತ ತಮ್ಮ ಮಾಂತ್ರಿಕತೆಯ ತಬಲಾ ವಾದನದ ಮೂಲಕ ಮನೆಮಾತಾಗಿದ್ದ ಝಾಕಿರ್ ಹುಸೇನ್ ಅವರು 73ನೇ ವಯಸ್ಸಿನಲ್ಲಿ ನಿಧನರಾದರು. ಇದರೊಂದಿಗೆ ಭಾರತೀಯ ಸಂಗೀತ ಲೋಕದ ಒಂದು ದೊಡ್ಡ ಕೊಂಡಿ ಕಳಚಿದಂತಾಗಿದೆ.
ಝಾಕಿರ್ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರು ಹಾಗೂ ಅತಿಯಾದ ರಕ್ತದೊತ್ತಡ ಅವರನ್ನು ಕಾಡುತ್ತಿತ್ತು. ಹೀಗಾಗಿ ಅಮೆರಿಕ ಪ್ರವಾಸದಲ್ಲಿದ್ದ ಅವರನ್ನು 2 ವಾರದ ಹಿಂದೆಯೇ ಸ್ಯಾನ್ ಫ್ರಾನ್ಸಿಸ್ಕೋ ಆಸ್ಪತ್ರೆಯಲ್ಲಿ ಐಸಿಯುಗೆ ದಾಖಲಿಸಲಾಗಿತ್ತು ಈ ಬಗ್ಗೆ ಭಾನುವಾರ ಸಂಜೆ ಖ್ಯಾತ ಕೊಳಲು ವಾದಕ ರಾಕೇಶ್ ಚೌರಾಸಿಯಾ ಮಾಹಿತಿ ನೀಡಿದ್ದರು.
ಹುಸೇನ್ ಆರೋಗ್ಯಕ್ಕೆ ಪ್ರಾರ್ಥಿಸಿ ಎಂದು ಮನವಿ ಮಾಡಿದ್ದರು. ಆದರೆ ಚಿಕಿತ್ಸೆ ಫಲಿಸದೇ ಅವರು ಮೃತರಾದರು ಎಂದು ಭಾನುವಾರ ರಾತ್ರಿ 9.30ರ ಸುಮಾರಿಗೆ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಝಾಕಿರ್ ನಿಧನ ಸುದ್ದಿಯನ್ನು ಅವರ ಮ್ಯಾನೇಜರ್ ನಿರ್ಮಲಾ ಬಚಾನಿ ಖಚಿತಪಡಿಸಿದ್ದಾರೆ.
ಶೋಕಸಾಗರ, ಗಣ್ಯರ ಕಂಬನಿ :
ಅವರ ನಿಧನದ ಸುದ್ದಿ ಕೇಳಿ ಸಂಗೀತ ಲೋಕ ಶೋಕದಲ್ಲಿ ಮುಳುಗಿದ್ದು, ಜಗತ್ತಿನ ಮೂಲೆ ಮೂಲೆಗಳಿಂದ ಶ್ರದ್ದಾಂಜಲಿಗಳ ಮಹಾಪೂರವೇ ಹರಿದು ಬರುತ್ತಿದೆ. ರಾಷ್ಟ್ರಪತಿ ಬ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು, ಕರ್ನಾಟಕದ ಸಿದ್ದರಾಮಯ್ಯ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಸಂಗೀತ ಲೋಕದ ದಿಗ್ಗಜರು, ಸಂಗೀತ ಪ್ರೇಮಿಗಳು ‘ಝಾಕಿರ್ಅವರ ಮರಣವು ಭಾರತೀಯ ಶಾಸ್ತ್ರೀಯ ಸಂಗೀತದ ಜಗತ್ತಿನಲ್ಲಿ ಒಂದು ಯುಗವನ್ನು ಅಂತ್ಯ ಗೊಳಿಸುತ್ತದೆ’ ಎಂದು ಆಘಾತ ವ್ಯಕ್ತಪಡಿಸಿದ್ದಾರೆ.