ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ದಿಲ್ಲಿಯ ಹೈದರಾಬಾದ್ ಹೌಸ್ ನಲ್ಲಿ ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ತಾನಾಯಕೆ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ ಅವರು ರಕ್ಷಣೆ, ವ್ಯಾಪಾರ ಮತ್ತು ಹೂಡಿಕೆ ಸೇರಿದಂತೆ ಪರಸ್ಪರ ವಿಷಯಗಳ ಹಿತಾಸಕ್ತಿಯ ಬಗ್ಗೆ ಚರ್ಚಿಸಿದ್ದಾರೆ.
ಸೆಪ್ಟೆಂಬರ್ ನಲ್ಲಿ ಶ್ರೀಲಂಕಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ದಿಸ್ತಾನಾಯಕೆ ತಮ್ಮ ಮೊದಲ ವಿದೇಶ ಪ್ರವಾಸಕ್ಕಾಗಿ ಭಾನುವಾರ ಭಾರತಕ್ಕೆ ಬಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸಾನಾಯಕೆ, ಭಾರತದ ಹಿತಾಸಕ್ತಿಗೆ ಹಾನಿಕಾರಕವಾದ ರೀತಿಯಲ್ಲಿ ನಮ್ಮ ಭೂಮಿಯನ್ನು ಯಾವುದೇ ರೀತಿಯಲ್ಲಿ ಬಳಸಲು ನಾವು ಅನುಮತಿಸುವುದಿಲ್ಲ ಎಂದು ನಾನು ಭಾರತದ ಪ್ರಧಾನಿಯವರಿಗೆ ಭರವಸೆ ನೀಡಿದ್ದೇನೆ.
ಭಾರತದೊಂದಿಗಿನ ಸಹಕಾರವು ಖಂಡಿತವಾಗಿಯೂ ಪ್ರವರ್ಧಮಾನಕ್ಕೆ ಬರುತ್ತದೆ ಮತ್ತು ಭಾರತಕ್ಕೆ ನಮ್ಮ ನಿರಂತರ ಬೆಂಬಲದ ಬಗ್ಗೆ ನಾನು ಭರವಸೆ ನೀಡಲು ಬಯಸುತ್ತೇನೆ ಎಂದಿದ್ದಾರೆ. ಉಭಯ ನಾಯಕರು ವ್ಯಾಪಕ ಮಾತುಕತೆ ನಡೆಸಿದ ನಂತರ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ದಿಸ್ತಾನಾಯಕೆ ಅವರ ಸಮ್ಮುಖದಲ್ಲಿ ಭಾರತ ಮತ್ತು ಶ್ರೀಲಂಕಾ ಎರಡನ್ನೂ ಪ್ರತಿನಿಧಿಸುವ ಅಧಿಕಾರಿಗಳು ತಿಳಿವಳಿಕೆ ಒಪ್ಪಂದಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ.