ಅಂಕೋಲಾ : ಸಹಸ್ರಾರು ಗಿಡ ಮರಗಳನ್ನು ಬೆಳೆಸಿ ಉಳಿಸುವ ಮೂಲಕ ಹಲವಾರು ಎಕರೆ ಅರಣ್ಯ ಬೆಳೆಸಿ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದ ವೃಕ್ಷಮಾತೆ ಅಂಕೋಲಾ ತಾಲೂಕಿನ ಹೊನ್ನಳ್ಳಿಯ ತುಳಸಿ ಗೌಡ (80) ಅವರು ಸೋಮವಾರ ಸಂಜೆ ಅನಾರೋಗ್ಯದಿಂದ ನಿಧನರಾದರು.
ಪರಿಸರ ಸಂರಕ್ಷಣೆಗೆ ತಮ್ಮ ವಿಶೇಷ ಕೊಡುಗೆಯ ಮೂಲಕ 2020ನೇ ಸಾಲಿನಲ್ಲಿ ರಾಷ್ಟ್ರದ ಅತ್ಯುನ್ನತ ಪುರಸ್ಕಾರಗಳಲ್ಲೊಂದಾದ ಪದ್ಮಶ್ರೀ ಪ್ರಶಸ್ತಿಯಿಂದ ಅವರು ಪುರಸ್ಕೃತರಾಗಿದ್ದರು.
1944 ಅಂಕೋಲಾ ತಾಲೂಕಿನ ಹೊನ್ನಳ್ಳಿಯ ಬಡ ಹಾಲಕ್ಕಿ ಕುಟುಂಬದಲ್ಲಿ ಜನಿಸಿದ ತುಳಸಿ ಗೌಡ ಅವರು ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡ ಕಾರಣ ಜೀವನ ನಿರ್ವಹಣೆಗೆ ತಾಯಿಯೊಂದಿಗೆ ಕೂಲಿ ಕೆಲಸಕ್ಕೆ ಹೋಗುವ ಅನಿವಾರ್ಯತೆ ಎದುರಾದ ಕಾರಣ ವಿದ್ಯಾಭ್ಯಾಸಕ್ಕೆ ಅವಕಾಶ ಸಿಕ್ಕಿರಲಿಲ್ಲ. ಬಾಲ್ಯದಲ್ಲೇ ಗೋವಿಂದ ಗೌಡ ಎನ್ನುವವರೊಂದಿಗೆ ವಿವಾಹ ನಡೆದು ಚಿಕ್ಕ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡಿದ್ದರು.
ಜೀವನ ನಿರ್ವಹಣೆಗೆ ಅರಣ್ಯ ಪ್ರದೇಶಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ತುಳಸಿ ಗೌಡ ಅವರು ಕೆಲಸ ಮಾಡುತ್ತಿದ್ದ ಪರಿಸರದಲ್ಲಿ ಗಿಡ ಮರಗಳೊಂದಿಗಿನ ಆತ್ಮೀಯ ನಂಟು ಬೆಸೆದುಕೊಂಡಿದ್ದರು. 60 ವರ್ಷಗಳ ಕಾಲ ನಿರಂತರವಾಗಿ ಗಿಡ ಬೆಳೆಸುವ ಕಾಯಕದಲ್ಲಿ ತೊಡಗಿಸಿ 30 ಸಾವಿರಕ್ಕೂ ಅಧಿಕ ಮರಗಳನ್ನು ಅರಣ್ಯ ಪ್ರದೇಶದಲ್ಲಿ ಬೆಳೆಸಿ ನೂರಾರು ಎಕರೆ ಅರಣ್ಯ ಭೂಮಿಯಲ್ಲಿ ಹಸಿರನ್ನು ಅರಳಿಸಿದ ಹಿರಿಮೆ ಹೊಂದಿದ್ದ ತುಳಸಜ್ಜಿ ಇತ್ತೀಚೆಗೆ ತಮ್ಮ ಇಳಿ ವಯಸ್ಸಿನಲ್ಲಿಯೂ ಗಿಡ ಮರ ಬೆಳೆಸುವ ಉತ್ಸುಕತೆ ಹೊಂದಿದ್ದರು.