ಪುಣೆ : ನಿಸ್ವಾರ್ಥ ಸೇವೆಯಲ್ಲಿ ನಿಜವಾದ ನೆಮ್ಮದಿ, ಸಂತೃಪ್ತಿ ಅಡಗಿದೆ ಮತ್ತು ಇದು ಇತರರಿಗೆ ನೆರವಾಗುವ ಪ್ರವೃತ್ತಿಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಆರೆಸ್ಸೆಸ್ ಸರಸಂಘಚಾಲಕ್ ಮೋಹನ್ ಭಾಗ್ವತ್ ನುಡಿದರು. ಮಹಾರಾಷ್ಟ್ರದ ಪುಣೆಯ ಭಾರತ ವಿಕಾಸ್ ಪರಿಷತ್ ವಿಕಲಾಂಗ ಕೇಂದ್ರದ ರಜತ ಮಹೋತ್ಸವದ ಸಮಾರೋಪದಲ್ಲಿ ಪಾಲ್ಗೊಂಡು ಭಾಗ್ವತ್ ಮಾತನಾಡಿದರು
ಸಮಾಜದಲ್ಲಿ ಯಾವುದೂ ಸರಿಯಿಲ್ಲ ಪ್ರತಿಯೊಂದೂ ತಪ್ಪೆಂಬ ಗ್ರಹಿಕೆ ಬೆಳೆಯುತ್ತಿರುವುದು ವಿಷಾದನೀಯ ಆದರೂ ಪ್ರತೀ ಋಣಾತ್ಮಕ ಅಂಶಗಳಿಗೆ ಪ್ರತಿಯಾಗಿ 40 ಪಟ್ಟು ಉತ್ತಮ ಸಂಗತಿಗಳು, ಮಾದರಿ ಸೇವಾ ಚಟುವಟಿಕೆಗಳು ಕೂಡ ಸಮಾಜದಲ್ಲಿ ಘಟಿಸುತ್ತಿರುವುದು ಸಮಾಧಾನದ ಸಂಗತಿ. ನಿಸ್ವಾರ್ಥ ಸೇವೆಗೆ ಸಮಾಜದ ವಿಶ್ವಾಸ ಗಳಿಸುವ ಶಕ್ತಿಯಿದೆ. ಹಾಗಾಗಿ ಇಂತಹ ಉತ್ತಮ ಚಟುವಟಿಕೆಗಳು, ಧನಾತ್ಮಕ ಪ್ರಯತ್ನಗಳ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವುದು ಅತ್ಯಗತ್ಯ” ಎಂದರು.
ಅಹಂ ಬಿಡದಿದ್ದರೆ ಅಪಾಯ ತಪ್ಪಿದ್ದಲ್ಲ :
ಪ್ರತಿಯೊಬ್ಬರೂ ಅಹಂ ಅನ್ನು ಬದಿಗಿಡಬೇಕು. ಇಲ್ಲದಿದ್ದಲ್ಲಿ ಯಾರೇ ಆಗಲಿ ಹಳ್ಳಕ್ಕೆ ಬೀಳುವುದು ನಿಶ್ಚಿತ ಪ್ರತಿಯೋರ್ವ ವ್ಯಕ್ತಿಯಲ್ಲೂ ಪರಮಾತ್ಮನ ಅಂಶವಿದೆ. ಇದು ಸಮಾಜ ಸೇವೆಗೆ ಪ್ರೇರಣಾದಾಯಿ. ಇದೇ ವೇಳೆ, ಮನುಜರಲ್ಲಿ ನಾನೆಂಬ ಅಹಂ ಕೂಡ ಇದೆ. ರಾಮಕೃಷ್ಣ ಪರಮಹಂಸರು ಹೇಳುವಂತೆ, ಪ್ರತಿಯೋರ್ವ ವ್ಯಕ್ತಿಯಲ್ಲೂ ಇಬ್ಬರು ನಾನು ಇದ್ದಾರೆ. ಈ ಪೈಕಿ ಪರಿಷ್ಕೃತ ನಾನನ್ನು ಜೋಪಾನ ಮಾಡಿಕೊಳ್ಳಿ ಮತ್ತು ಕಚ್ಚಾ ನಾನನ್ನು (ಅಹಂ)ಕಿತ್ತೊಗೆಯಿರಿ. ವ್ಯಕ್ತಿ, ಆತ ಅಥವಾ ಆಕೆ ಕಚ್ಚಾ ನಾನು ಜತೆ ಜೀವನ ನಡೆಸಿದರೆ ಹಳ್ಳಕ್ಕೆ ಬೀಳುವುದು ಖಚಿತ ಎಂದು ಎಚ್ಚರಿಸಿದರು.