ನವದೆಹಲಿ : ಏಕಕಾಲದಲ್ಲಿ ಲೋಕಸಭೆ ಹಾಗೂ ವಿಧಾನಸಭೆಗೆ ಚುನಾವಣೆ ನಡೆಸುವ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ‘ಒಂದು ದೇಶ, ಒಂದು ಚುನಾವಣೆ’ ಕುರಿತ 2 ಸಾಂವಿಧಾನಿಕ ತಿದ್ದುಪಡಿ ಮಸೂದೆಗಳನ್ನು ಲೋಕಸಭೆಯಲ್ಲಿ ಮಂಗಳವಾರ ಮಂಡಿಸಲಾಗಿದೆ. ಈ ಕುರಿತು ಆರಂಭ ವಾದ ಪರ-ವಿರೋಧ ಚರ್ಚೆ ಅಪೂರ್ಣ ಗೊಂಡಿದ್ದು ಸರ್ಕಾರವು ಇದನ್ನು ತಕ್ಷಣವೇ ಅಂಗೀಕರಿಸಲು ಮುಂದಾಗದೇ ಜಂಟಿ ಸದನ ಸಮಿತಿಗೆ (ಜೆಪಿಸಿ) ಕಳಿಸುವ ಇರಾದೆ ವ್ಯಕ್ತಪಡಿಸಿದೆ.
ಬುಧವಾರ ಈ ಬಗ್ಗೆ ನಿರ್ಧಾರ ಆಗುವ ಸಾಧ್ಯತೆ ಇದ್ದು ಬಳಿಕ ಜೆಪಿಸಿ ರಚನೆ ಆಗಲಿದೆ. ಜೆಪಿಸಿಯಲ್ಲಿ 31 ಸಂಸದರು (21 ಲೋಕಸಭೆ, 10 ರಾಜ್ಯಸಭೆ) ಇರಲಿದ್ದು ಬಿಜೆಪಿಗರೇ ಅಧ್ಯಕ್ಷ ಆಗುವ ಸಂಭವವಿದೆ. 90 ದಿನಗಳಲ್ಲಿ ಇದು ವರದಿ ನೀಡಬೇಕು. ಇದು ಅನಗತ್ಯ ಚುನಾವಣಾ ಖರ್ಚು ವೆಚ್ಚ ತಪ್ಸಪಿಲು ಹಾಗೂ ನೀತಿ ಸಂಹಿತೆ ಹೇರಿಕೆಯಿಂದ ಆಗುವ ಅಭಿವೃದ್ಧಿ ಚಟುವಟಿಕೆಗಳ ಸ್ಥಾಗಿತ್ಯವನ್ನು ತಡೆಯಲು ಸಹಕಾರಿ ಎಂದಿರುವ ಕೇಂದ್ರ ಸರ್ಕಾರ, ಇದರಿಂದ ಸಂವಿಧಾನಕ್ಕೆ ಯಾವುದೇ ಹಾನಿ ಆಗುವುದಿಲ್ಲ ಎಂದು ಸಮರ್ಥಿಸಿಕೊಂಡಿದೆ. ಆದರೆ ಮಸೂದೆ ವಿರೋಧಿಸಿರುವ ಪ್ರತಿಪಕ್ಷಗಳು, ಇದನ್ನು ಸಂವಿಧಾನ ವಿರೋಧಿ ಎಂದು ಕರೆದಿದ್ದು ಇದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಕಿಡಿ ಕಾರಿವೆ. ಜೊತೆಗೆ ಕರಡು ವರದಿಯನ್ನು ಜೆಪಿಸಿಗೆ ವಹಿಸುವಂತೆ ಒತ್ತಾಯಿಸಿದರು.