ಬೀಜಿಂಗ್ : ಭಾರತ-ಚೀನಾ ನಿಯೋಗ ಮಟ್ಟದ ಮಾತುಕತೆಗಾಗಿ 5 ವರ್ಷ ಬಳಿಕ ಚೀನಾ ಪ್ರವಾಸ ಕೈಗೊಂಡಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಸಭೆಗಳು ಯಶಸ್ವಿಯಾಗಿವೆ. ಈ ವೇಳೆ ಶಾಂತಿ ಸ್ಥಾಪನೆಗೆ ಹಾಗೂ 5 ವರ್ಷದಿಂದ ನಡೆಯದ ಮಾನಸ ಸರೋವರ ಯಾತ್ರೆ ಪುನಾರಂಭಕ್ಕೆ ಉಭಯ ದೇಶಗಳು ಸಮ್ಮತಿಸಿವೆ.
ಬುಧವಾರ ಚೀನಾ ಉಪಾಧ್ಯಕ್ಷ ಹ್ಯಾನ್ ಝಂಗ್ ಹಾಗೂ ವಿದೇಶಾಂಗ ಸಚಿವ ಯಿ ವಾಂಗ್ ಅವರನ್ನು ದೋವಲ್ ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಉಭಯ ದೇಶಗಳು ಶಾಂತಿ ಸ್ಥಾಪನೆಗೆ ಸಹಮತ ವ್ಯಕ್ತಪಡಿಸಿದವು.
ಎರಡೂ ಕಡೆಯವರು ಗಡಿಯಾಚೆಗಿನ ವಿನಿಮಯ ಮತ್ತು ಸಹಕಾರವನ್ನು ಬಲಪಡಿಸಲು ಮತ್ತು ಮಾನಸ ಸರೋವರ ಯಾತ್ರೆ ಪುನರಾರಂಭಿಸಲು ಮತ್ತು ನಾಥುಲಾ ಗಡಿ ವ್ಯಾಪಾರವನ್ನು ಉತ್ತೇಜಿಸಲು ಒಪ್ಪಿಕೊಂಡರು ಎಂದು ಚೀನಾ ವಿದೇಶಾಂಗ ಸಚಿವಾಲಯ ಹೇಳಿದೆ. ಕೋವಿಡ್ ನಂತರ (2020ರ ನಂತರ) ಮಾನಸ ಸರೋವರ ಯಾತ್ರೆ ಸ್ಥಗಿತಗೊಂಡಿದೆ. ಇದು ಶಾಂತಿ ಸ್ಥಾಪನೆಯತ್ತ ಮಹತ್ವದ ಹೆಜ್ಜೆ ಎಂದು ದೋವಲ್ ಹೇಳಿದ್ದಾರೆ.