-
ಅರ್ಜುನನೇ ಮಾದರಿ
ಇಂದ್ರಿಯಗಳೆಂಬ ಕುದುರೆಗಳನ್ನು ನಿಯಂತ್ರಿಸಲು ಕೃಷ್ಣ ಸಾರಥ್ಯ ದೊರಕಬೇಕೆಂದು ಬಯಸಿದ ಮಾತ್ರಕ್ಕೆ ಅದು ಲಭಿಸುವುದೇ? ಇಲ್ಲ. ಬಯಸಿದ್ದೆಲ್ಲವೂ ಸುಲಭದಲ್ಲಿ ದಕ್ಕಿದರೆ ದೇವರ ನೆನಪು ಯಾರಿಗಾದರೂ ಆಗುವುದುಂಟೆ? ಕೃಷ್ಣನು ನೆನೆದವರ ಮನದಲ್ಲಿ ವಾಸಿಸುವನೆಂಬ ಮಾತೇನೋ ನಿಜ. ಆದರೆ ಕೇವಲ ಕಷ್ಟಕಾಲ ಬಂದಾಗ ಮಾತ್ರ ದೇವರನ್ನು ನೆನೆದರೆ ಆಗದು. ಅನುದಿನವೂ ಅನುಕ್ಷಣವೂ ನೆನೆಯುವುದು ಅಗತ್ಯ. ಆಧುನಿಕ ಯಾಂತ್ರಿಕ ಬದುಕಿನಲ್ಲಿ ನಮ್ಮ ದೊಡ್ಡ ಸಮಸ್ಯೆ ಎಂದರೆ ಸಂಕಷ್ಟ ಎದುರಾಗದೇ ನಾವು ದೇವರನ್ನು ನೆನೆಯುವ ಗೋಜಿಗೆ ಹೋಗುವುದಿಲ್ಲ. ಆ ದೇವರು ನಮಗೆ ಕಷ್ಟಕಾಲದಲ್ಲಿ ತನ್ನ ಅಭಯಹಸ್ತವನ್ನು ನೀಡುವನೋ ಇಲ್ಲವೋ ಎಂಬ ಗುಮಾನಿ ನಮ್ಮದು. ಆತ್ಮಜ್ಞಾನವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪರಮಾತ್ಮನನ್ನು ಅನುದಿನವೂ ಅನುಕ್ಷಣವೂ ನೆನೆಯಬೇಕು ಎನ್ನುವಾಗ ಗೀತೋಪದೇಶ ಪಡೆದು ಧನ್ಯನಾದ ಅರ್ಜುನನು ನಮಗೆ ಮೊದಲ ಮಾದರಿ ಪುರುಷನಾಗುತ್ತಾನೆ. ಕುರುಕ್ಷೇತ್ರದಲ್ಲಿ ಯುದ್ಧ ಮಾಡನೆಂದು ಹೇಳಿದ ತನ್ನ ಪರಮ ಭಕ್ತನಾದ ಅರ್ಜುನನ ಗೊಂದಲವನ್ನು ನಿವಾರಿಸುವ ಶ್ರೀಕೃಷ್ಣ ಆತನನ್ನು ‘ಗುಡಾಕೇಶಃ’ ಎಂದು ಪ್ರೀತಿಯಿಂದ ಸಂಬೋಧಿಸುತ್ತಾನಷ್ಟೇ? ಗುಡಾಕೇಶಃ ಎಂದರೆ ನಿದ್ರೆಯನ್ನು ಜಯಿಸಿದವನು ಎಂದರ್ಥ. ಇಲ್ಲಿ ನಿದ್ರೆಯನ್ನು ಜಯಿಸಿದವನೆಂದರೆ ಅಜ್ಞಾನವನ್ನು ಗೆದ್ದವನು ಎಂದರ್ಥ. ಅಜ್ಞಾನವನ್ನು ಗೆದ್ದವನು ಎಂದರೆ ನಿದ್ರಾವಸ್ಥೆಯಲ್ಲೂ ಪ್ರಜ್ಞಾವಸ್ಥೆಯಲ್ಲೂ ದೇವರ ನಾಮವನ್ನು ನೆನೆಯುವವನು ಎಂದೇ ಅರ್ಥ. ಇಂದ್ರಿಯಗಳ ನಿರ್ದೇಶಕನಾದ ಹೃಷಿಕೇಶನೆಂಬ ಕೃಷ್ಣನ ಸಾರಥ್ಯದಲ್ಲಿ ಆತನ ಪರಮ ಸನ್ನಿಧಿಯನ್ನು ಪಡೆಯಬೇಕೆಂದು ಬಯಸುವವರು ನಿಜವಾದ ಅರ್ಥದಲ್ಲಿ ಅರ್ಜುನನಂತೆ ‘ಗುಡಾಕೇಶ’ನಾಗಬೇಕಾಗುತ್ತದೆ.