ನವದೆಹಲಿ : ಸಂಸತ್ ಹೊರಗೆ ಗುರುವಾರ ನಡೆದ ಕಾಂಗ್ರೆಸ್ ಬಿಜೆಪಿ ಸಂಸದರ ಸಂಘರ್ಷಕ್ಕೆ ಸಂಬಂಧಿಸಿದಂತೆ ಲೋಕಸಭೆ ಪ್ರತಿಪಕ್ಷನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ದಿಲ್ಲಿ ಕ್ರೈಂ ಬ್ರಾಂಚ್ ಕೈಗೆತ್ತಿಕೊಂಡಿದೆ. ರಾಹುಲ್ ವಿರುದ್ಧ ಪ್ರಕರಣ ದಾಖಲಿಸಿದ್ದ ಪಾರ್ಲಿಮೆಂಟ್ ಸ್ಪೀಟ್ ಪೊಲೀಸರು ಪ್ರಕರಣವನ್ನು ದೆಹಲಿಯ ಅಪರಾಧ ವಿಭಾಗಕ್ಕೆ ವರ್ಗಾಯಿಸಿದ್ದಾರೆ. ಈ ಸಂಬಂಧ ರಾಹುಲ್ ರನ್ನು ಶೀಘ್ರ ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ. ಮತ್ತೊಂದೆಡೆ ಗಾಯಗೊಂಡಿರುವ 2 ಸಂಸದರ ಹೇಳಿಕೆಯನ್ನು ಪೊಲೀಸರು ದಾಖಲಿಸುವ ಸಾಧ್ಯತೆಯಿದೆ. ಅಲ್ಲದೆ, ಅಗತ್ಯ ಬಿದ್ದರೆ ದೃಶ್ಯ ಮರು ಸೃಷ್ಟಿ ಮಾಡುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ. ಬಿಜೆಪಿ ವಿರುದ್ಧ ಕಾಂಗ್ರೆಸ್ ನೀಡಿದ ದೂರಿನ ಬಗ್ಗೆ ಲೀಗಲ್ ಅಭಿಪ್ರಾಯ ಕೇಳಿದ್ದೇವೆ ಎಂದಿದ್ದಾರೆ.
ಐಸಿಯುನಲ್ಲಿ ಸಂಸದರು :
ಈ ನಡುವೆ ಗಲಾಟೆಯಲ್ಲಿ ಗಾಯಗೊಂಡಿದ್ದ ಬಿಜೆಪಿ ಸಂಸದರಾದ ಪ್ರತಾಪ್ ಸಾರಂಗಿ, ಮುಕೇಶ್ ರಜಪೂತ್ ಆರೋಗ್ಯ ಸದ್ಯ ಸುಧಾರಿಸಿದೆ. ಆದರೂ ಇಬ್ಬರಿಗೂ ಶುಕ್ರವಾರ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.
ಮುಕೇಶ್‌ಗೆ ಇನ್ನೂ ಸ್ವಲ್ಪ ತಲೆ ತಿರುಗುವಿಕೆ ಮತ್ತು ತಲೆ ಭಾರವಿದೆ. ಸಾರಂಗಿ ಅವರಿಗೂ ಹಳೆಯ ಹೃದಯ ಸಮಸ್ಯೆಯಿದೆ. ಈಗಾಗಲೇ ಅವರ ಹೃದಯದಲ್ಲಿ ಸ್ಟಂಟ್ ಇದೆ. ಚಿಕಿತ್ಸೆ ನೀಡುತ್ತಿರುವ ವೈದ್ಯರು ಯಾವಾಗ ವಾರ್ಡ್‌ಗೆ ಸ್ಥಳಾಂತರಿಸಬೇಕು ಎಂದು ಹೇಳುತ್ತಾರೆ’ ಎಂದು ವೈದ್ಯರು ಹೇಳಿದ್ದಾರೆ.