ವಿಶ್ವಸಂಸ್ಥೆ : ಭಾರತದ ಯೋಗ ಪರಂಪರೆಗೆ ಈ ಹಿಂದೆ ಮನ್ನಣೆ ನೀಡಿದ್ದ ವಿಶ್ವಸಂಸ್ಥೆ ಇದೀಗ ಭಾರತದ ಧ್ಯಾನಕ್ಕೂ ಮನ್ನಣೆ ನೀಡಿದೆ. ಕನ್ನಡಿಗ ಶ್ರೀ ಶ್ರೀ ರವಿಶಂಕರ್ ಗುರೂಜಿ ನೇತೃತ್ವದಲ್ಲಿ ವಿಶ್ವಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮೊದಲ ವಿಶ್ವ ಧ್ಯಾನ ದಿನ ಘೋಷಣೆ ಮಾಡಲಾಗಿದ್ದು, ಮೊದಲ ದಿನವನ್ನು ಶನಿವಾರ ವಿಶ್ವಾದ್ಯಂತ ಆಚರಿಸಲಾಗಿದೆ.
ಮೊದಲ ದಿನದ ವಿಶ್ವ ಧ್ಯಾನದ ಆಚರಣೆಯಲ್ಲಿ ವಿಶ್ವದ ನೂರಾರು ದೇಶಗಳ 85 ಲಕ್ಷಕ್ಕೂ ಹೆಚ್ಚು ಜನರು ಭಾಗಿಯಾಗಿದ್ದು ಗಿನ್ನೆಸ್ ದಾಖಲೆ ಪುಟಕ್ಕೆ ಸೇರಿದೆ.
ಭಾರತ ಮತ್ತು ವಿಶ್ವಸಂಸ್ಥೆ ಸಹಭಾಗಿತ್ವದಲ್ಲಿ ‘ಜಾಗತಿಕ ಶಾಂತಿ ಮತ್ತು ಸಾಮರಸ್ಯಕ್ಕಾಗಿ ಧ್ಯಾನ’ ಎಂಬ ಘೋಷ ವಾಕ್ಯದಡಿ ಮೊದಲ ಬಾರಿಗೆ ವಿಶ್ವ ಧ್ಯಾನ ದಿನವನ್ನು ಶನಿವಾರ ಆಚರಿಸಲಾಯಿತು. ಈ ಮೂಲಕ ಮುಂದಿನ ವರ್ಷಗಳಲ್ಲಿ ಡಿ.21ರಂದು ವಿಶ್ವ ಧ್ಯಾನ ದಿನ ಆಚರಣೆಗೆ ಮುನ್ನುಡಿ ಬರೆಯಲಾಗಿದೆ. ಬಳಿಕ ಶ್ರೀ ಶ್ರೀ ನೇತೃತ್ವದಲ್ಲಿ ಧ್ಯಾನ ಕಾರ್ಯಕ್ರಮ ನಡೆಸಲಾಗಿದೆ.
ವಿಶ್ವ ಧ್ಯಾನ ದಿನ ಘೋಷಣೆ ಬಳಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಗುರುದೇವ್ ಶ್ರೀ ಶ್ರೀ ರವಿಶಂಕರ್ ಒಂದು ಪ್ರಶಾಂತವಾದ ಮನಸ್ಸು ಇತರ ನೂರು ಜನರಿಗೆ ಉತ್ತಮವಾದ ವಾತಾವರಣ ಸೃಷ್ಟಿಸಬಲ್ಲದು. ಸಾಮೂಹಿಕ ಒಳಿತಿಗಾಗಿ, ಸಾಮರಸ್ಯಕ್ಕಾಗಿ ಮತ್ತು ಆಧ್ಯಾತ್ಮಿಕ ಬೆಳವಣಿಗೆಗಾಗಿ ವ್ಯಕ್ತಿಗಳು ಹಾಗೂ ರಾಷ್ಟ್ರಗಳು ಧ್ಯಾನವನ್ನು ಆಲಿಂಗಿಸಬೇಕು’ ಎಂದು ಕರೆ ನೀಡಿದರು.
ದಿನನಿತ್ಯದ ಜೀವನದಲ್ಲಿ ಧ್ಯಾನವನ್ನು ಅಳವಡಿಸಿಕೊಳ್ಳಲೇಬೇಕಾದ ತುರ್ತು ಸ್ಥಿತಿ ಈಗ ಬಂದಾಗಿದೆ ಎಂದ ಅವರು ‘ಧ್ಯಾನವು ಪ್ರತಿಯೊಂದು ವ್ಯಕ್ತಿಗೂ, ಪ್ರತಿಯೊಂದು ಮನೆಗೂ ತಲುಪಬೇಕು ಎಂದರು