ಬೆಂಗಳೂರು : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಆರೋಪದ ವಿವಾದ ಬಳಿಕ ಪ್ರಾಣ ಬೆದರಿಕೆ ಕರೆಗಳು ಬರುತ್ತಿದ್ದು, ಪ್ರಭಾವಿಗಳು ಶಾಮೀಲಾ ಗಿರುವ ಸಾಧ್ಯತೆ ಇರುವ ಕಾರಣ ಪ್ರಕರಣವನ್ನು ನ್ಯಾಯಾಂಗ ತನಿಖೆ ವಹಿಸಬೇಕು ಎಂದು ಸರ್ಕಾರವನ್ನು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಆಗ್ರಹಿಸಿದ್ದಾರೆ.
ಶನಿವಾರ ಮಲ್ಲೇಶ್ವರದಲ್ಲಿನ ಬಿಜೆಪಿ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಮ್ಮನ್ನು ಸಮರ್ಥಿಸಿಕೊಂಡ ಅವರು, ನನ್ನ ರಾಜಕೀಯ ಜೀವನದುದ್ದಕ್ಕೂ ನಾನೆಂದೂ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಂಡಿಲ್ಲ ಎಂದು ಹೇಳಿದರು.
ನನ್ನ ಹತ್ಯೆಗೆ ಸಂಚು :
ಇದೇ ವೇಳೆ ಪೊಲೀಸರು ವಶಕ್ಕೆ ಪಡೆದುಕೊಂಡ ಬಳಿಕ ನಡೆದ ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಅವರು, ನನ್ನನ್ನು ಪೊಲೀಸರು ಜತೆಗೆ ಕರೆದೊಯ್ಯವಾಗ ನಾನು ದೂರವಾಣಿಯಲ್ಲಿ ಮಾತನಾಡುತ್ತಿದ್ದೆ. ಈ ಬಗ್ಗೆ ಜತೆಗಿದ್ದ ಪೊಲೀಸರಿಗೆ ಕರೆ ಮಾಡಿದ್ದ ಮೇಲಾಧಿಕಾರಿಗಳು ಫೋನ್ನಲ್ಲಿ ಮಾತನಾಡಲು ಅವರಿಗೆ (ಸಿ.ಟಿ.ರವಿಗೆ) ಅವಕಾಶ ಏಕೆ ನೀಡುತ್ತಿದ್ದೀರಿ? ಎಂದು ಹೇಳುತ್ತಿರುವುದನ್ನು ಕೇಳಿಸಿಕೊಂಡಿದ್ದೇನೆ. ಹೀಗಾಗಿ ನನ್ನ ಫೋನ್ ಟ್ಯಾಪಿಂಗ್ ಆಗಿರುವ ಬಗ್ಗೆ ಅನುಮಾನ ಇದೆ. ಅಲ್ಲದೇ, ಪ್ರಕರಣ ನಡೆದ ನಂತರ ಕೆಲವು ಅನಾಮಧೇಯ ವ್ಯಕ್ತಿಗಳು ಕರೆ ಮಾಡಿ ಪ್ರಾಣ ಬೆದರಿಕೆಯೊಡ್ಡುತ್ತಿದ್ದಾರೆ.ನನ್ನ ಜೀವಕ್ಕೆ ತೊಂದರೆಯಾದರೆ ಅದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಅವರು ಆರೋಪಿಸಿದರು