ಮಂಗಳೂರು : ಅಪ್ರಾಪ್ತ ಬಾಲಕಿ ಮತ್ತು ವಿವಾಹಿತ ಮಹಿಳೆ ಬಚ್ಚಲು ಮನೆಯಲ್ಲಿ ಸ್ನಾನ ಮಾಡುತ್ತಿದ್ದುದನ್ನು ತನ್ನ ಮೊಬೈಲ್‌ನಲ್ಲಿ ವೀಡಿಯೋ ಚಿತ್ರೀಕರಿಸಿದ ತೋಟ ಬೆಂಗ್ರೆ ನಿವಾಸಿ ರಂಶೀದ್ ಎಂಬಾತನಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ಯ ನ್ಯಾಯಾಲಯ ಎಫ್‌ಟಿಎಸ್‌ಸಿ-1 (ಪೋಕ್ಲೋ) ಐದು ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು 15 ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾದ ಐದೇ ತಿಂಗಳಲ್ಲಿ ಪ್ರಕಟವಾದ ತೀರ್ಪು ಇದಾಗಿದೆ.
ಅಪ್ರಾಪ್ತ ಬಾಲಕಿ ಹಾಗೂ ವಿವಾಹಿತ ಮಹಿಳೆ ಮನೆಯಲ್ಲಿ ಬಾತ್ ರೂಂನಲ್ಲಿ ಸ್ನಾನ ಮಾಡುತ್ತಿದ್ದುದನ್ನು ರಂಶೀದ್ 2024ರ ಜುಲೈ 5 ಮತ್ತು 7ರಂದು ರಾತ್ರಿ 8-9 ಗಂಟೆಯ ನಡುವೆ ತನ್ನ ಮೊಬೈಲ್‌ನಲ್ಲಿ ವೀಡಿಯೋ ಮಾಡಿದ್ದ, ಜು. 16ರಂದು ಇನ್ನೊಂದು ಮನೆಯ ಟೆರೇಸ್ ಮೇಲೆ ವೀಡಿಯೋ ಮಾಡುವ ಉದ್ದೇಶದಿಂದ ಹೋಗಿದ್ದು, ಇದನ್ನು ಮನೆಯವರು ಗಮನಿಸಿದಾಗ ಅಲ್ಲಿಂದ ಪರಾರಿಯಾಗಿದ್ದನು. ಈ ವೇಳೆ ಆತನ ಮೊಬೈಲ್ ಕೆಳಗೆ ಬಿದ್ದಿದೆ. ಮೊಬೈಲ್ ವಶಪಡಿಸಿಕೊಂಡ ಮನೆಯವರು ಆತನನ್ನು ಪತ್ತೆ ಹಚ್ಚಿ ಆತನ ಮೂಲಕವೇ ಮೊಬೈಲ್‌ನ ಲಾಕ್ ತೆಗೆಸಿ ನೋಡಿದಾಗ ಬಾತ್ ರೂಂನಲ್ಲಿ ಸ್ನಾನ ಮಾಡುತ್ತಿದ್ದ ವೀಡಿಯೋ ಕಂಡು ಬಂದಿದೆ. ಮನೆಯೊಡತಿ ನೀಡಿದ ದೂರಿನಂತೆ ಆತನ ವಿರುದ್ಧ ಜು.17ರಂದು ಪಣಂಬೂರು ಠಾಣೆಯಲ್ಲಿ ಕೇಸು ದಾಖಲಾಗಿತ್ತು