ಬೆಂಗಳೂರು : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಕುರಿತು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಆಕ್ಷೇಪಾರ್ಹ ಪದ ಬಳಕೆ ಪ್ರಕರಣ ಮುಗಿದ ಅಧ್ಯಾಯ. ಈ ಪ್ರಕರಣವನ್ನು ನೈತಿಕತೆ ಸಮಿತಿಗೆ ನೀಡುವ ಅಗತ್ಯ ಇಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಪ್ರತಿಪಾದಿಸಿದ್ದಾರೆ.
ಅಲ್ಲದೆ, ಸದನದೊಳಗೆ ನಡೆದ ಘಟನೆಗಳಿಗೆ ಸಂಬಂಧಿಸಿ ಪೊಲೀಸರು ಹಸ್ತಕ್ಷೇಪ ಮಾಡುವಂತಿಲ್ಲ. ಹೀಗಿದ್ದರೂ ಮಹಜರು ಮಾಡುವುದಾಗಿ ಪೊಲೀಸರು ಕೇಳಿದ್ದರು ಆದರೆ ನಾನು ಅನುಮತಿ ನೀಡಿಲ್ಲ ಒಂದು ವೇಳೆ ಸದನದೊಳಗಿನ ಪ್ರಕ್ರಿಯೆಗೆ ಪೊಲೀಸರು ಹಸ್ತಕ್ಷೇಪ ಮಾಡಲು ಮುಂದಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಸಿದರು.
ಸೋಮವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಸದನದೊಳಗೆ ನಡೆದ ಘಟನೆ ಬಗ್ಗೆ ಹಸ್ತಕ್ಷೇಪ ಮಾಡಲು ಪೊಲೀಸರಿಗೆ ಅಧಿಕಾರ ಮತ್ತು ಹಕ್ಕು ಎರಡೂ ಇಲ್ಲ. ಈ ಘಟನೆ ಬಗ್ಗೆ ಸದನದಲ್ಲಿ ನಾನು ರೂಲಿಂಗ್ ನೀಡಿ ಕಲಾಪವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದ್ದೇನೆ. ಹೀಗಾಗಿ ಇದು ಮುಗಿದ ಅಧ್ಯಾಯ ಎಂದರು.