ಕುಂದಾಪುರ : ಬಸ್ರೂರು ಅಪ್ಪಣ್ಣ ಹೆಗ್ಡೆಯವರು ಆತ್ಮವಿಶ್ವಾಸದ ಪ್ರತೀಕವಿದ್ದಂತೆ ಎಲ್ಲ ಸಂದರ್ಭದಲ್ಲೂ ಅಧಿಕಾರಯುತವಾಗಿ ಗಟ್ಟಿ ಸ್ವರದಲ್ಲಿ ಮಾತನಾಡುತ್ತಾರೆ ನಿಂದನೆ, ಪ್ರಶಂಸೆ ಎರಡನ್ನೂ ಸಮಾನವಾಗಿ ಸ್ವೀಕರಿಸಿದ ಅವರದು ಸಮತೋಲನದ ಬದುಕು ಯಾವುದನ್ನೂ ಹೆಚ್ಚಿಗೆ ತಲೆಗೆ ಹಚ್ಚಿಕೊಳ್ಳದ ಅಜಾತಶತ್ತು ಸಹನೆ, ತಾಳ್ಮೆ ಹಾಗೂ ಪರೋಪಕಾರದ ಸಾಕಾರ ಮೂರ್ತಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಮಂಗಳವಾರ ಸಂಜೆ ವಕ್ವಾಡಿಯ ಗುರುಕುಲ ಶಿಕ್ಷಣ ಸಂಸ್ಥೆ ಆವರಣದಲ್ಲಿ ಬಿ. ಅಪ್ಪಣ್ಣ ಹೆಗ್ಡೆ ಜನ್ಮ ದಿನೋತ್ಸವ ಸಮಿತಿ ಹಾಗೂ ಬಸ್ರೂರು ಅಪಣ್ಣ ಹೆಗ್ಡೆ ಪ್ರತಿಷ್ಠಾನದ ವತಿಯಿಂದ ಧಾರ್ಮಿಕ ಮುಂದಾಳು ಬಿ. ಅಪ್ಪಣ್ಣ ಹೆಗ್ಡೆಯವರಿಗೆ 90ನೇ ಜನ್ಮ ದಿನದ ಪ್ರಯುಕ್ತ ಸಾರ್ವಜನಿಕ ಗೌರವ ಸಮರ್ಪಿಸಿ ಮಾತನಾಡಿದರು.
ಪಂಚಾಯಿತಿಕೆಯಲ್ಲಿ ಬಹಳ ದೊಡ್ಡ ಹೆಸರು ಮಾಡಿರುವ ಅವರಿಗೆ ದೀರ್ಘಾಯುಷ್ಯ ಪ್ರಾಪ್ತವಾಗಲಿ. ಅಪಣ್ಣ ಹಾಗೂ ಅಣ್ಣಪ್ಪ ಎರಡೂ ಹೆಸರಿನಲ್ಲಿರುವ ಪದಗಳು ಒಂದೇ. ಅಪ್ಪಣ್ಣ ಪದವನ್ನು ಆಂಗ್ಲ ಭಾಷೆಯಲ್ಲಿ ಉಲ್ಟಾ ಬರೆದರೆ ಅಣ್ಣಪ್ಪ ಆಗುತ್ತದೆ ಎಂದರು.
ಶಿಕ್ಷಣ ಪ್ರಶಸ್ತಿ ಪ್ರದಾನ
ಬಸ್ರೂರು ಅಪ್ಪಣ್ಣ ಹೆಗ್ಡೆ ಶಿಕ್ಷಣ ಪ್ರಶಸ್ತಿ ಸ್ವೀಕರಿಸಿದ ವಿಶ್ರಾಂತ ಕುಲಪತಿ ಡಾ| ಬಿ.ಎ. ವಿವೇಕ ರೈ ಮಾತನಾಡಿ, ಇದೊಂದು ಅಪೂರ್ವವಾದ ಸಂಗಮ. ಇಂತಹ ಪುಣ್ಯ ಪುರುಷರಿರುವ ವೇದಿಕೆ ಮತ್ತೆಂದೂ ಸಿಗಲು ಸಾಧ್ಯವಿಲ್ಲ. ಭಾಗಿಯಾಗುವ ಅವಕಾಶ ಸಿಕ್ಕಿರುವುದೇ ನನ್ನ ಪುಣ್ಯ ಎಂದರು.
ಅಪ್ಪಣ್ಣ ಹೆಗ್ಡೆ ಎಲ್ಲರಿಗೂ ಮಾದರಿ
ಅಧ್ಯಕ್ಷತೆ ವಹಿಸಿದ್ದ ಬಿ. ಅಪ್ಪಣ್ಣ ಹೆಗ್ಡೆ ಜನ್ಮ ದಿನೋತ್ಸವ ಸಮಿತಿ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವ ಮಾತನಾಡಿ, ಹೆಗ್ಡೆಯವರ ಜೀವನ ಮೌಲ್ಯವನ್ನು ಕಿರಿಯರಾದ ನಾವೆಲ್ಲರೂ ಅನುಸರಿಸಬೇಕು. ಸತ್ಯ, ನ್ಯಾಯ, ಧರ್ಮಕ್ಕಾಗಿ ಜೀವನ ಪರ್ಯಂತ ಹೋರಾಡಿದ ಮೇರು ವ್ಯಕ್ತಿತ್ವ ಅವರದ್ದು ಎಂದರು
ಸಮಾರಂಭದಲ್ಲಿ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಡಿ ಯಶ್ ಪಾಲ್ ಸುವರ್ಣ, ರಾಜೇಗೌಡ, ಮಾಜಿ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿ.ಎಂ. ಸುಕುಮಾರ್ ಶೆಟ್ಟಿ ಸಹಿತ ವಿವಿಧ ಗಣ್ಯರು ಶುಭ ಕೋರಿದರು. ಗುರುಕುಲ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯನಿರ್ವಾಹಕ ನಿರ್ದೇಶಕ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ ರಾಮ್ ರತನ್ ಹೆಗ್ಡೆ, ಬಿ. ಅಪ್ಪಣ್ಣ ಹೆಗ್ಡೆ ಜನ್ಮ ದಿನೋತ್ಸವ ಸಮಿತಿ ಪದಾಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.
ಗುರುಕುಲ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯನಿರ್ವಾಹಕಿ ಅನುಪಮಾ ಎಸ್. ಶೆಟ್ಟಿ ಸ್ವಾಗತಿಸಿ, ಸಮಿತಿಯ ವಸಂತ್ ಗಿಳಿಯಾರು ಪ್ರಸ್ತಾವಿಸಿದರು. ಉದಯ ಶೆಟ್ಟಿ ಪಡುಕೆರೆ ಪ್ರಶಸ್ತಿ ಪತ್ರ ವಾಚಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ಆರ್. ದಿನಕರ ಶೆಟ್ಟಿ ಫಲಾನುಭವಿಗಳ ಪಟ್ಟಿ ವಾಚಿಸಿದರು. ಕೆ.ಸಿ. ರಾಜೇಶ್ ನಿರೂಪಿಸಿ, ಕಲಾಕ್ಷೇತ್ರ ಕುಂದಾಪುರದ ಬಿ. ಕಿಶೋರ್ ಕುಮಾರ್ ಕುಂದಾಪುರ ವಂದಿಸಿದರು.