ನವದೆಹಲಿ : ಅವಿವಾಹಿತ ಪುರುಷರನ್ನು ಮದುವೆಯಾಗಿ, ನಂತರ ಅವರ ಮನೆಯಿಂದ ನಗದು ಹಾಗೂ ಆಭರಣಗಳನ್ನು ದೋಚಿ ಪರಾರಿಯಾಗುತ್ತಿದ್ದ ವಂಚಕರ ತಂಡವೊಂದನ್ನು ಉತ್ತರಪ್ರದೇಶದ ಬಂದಾದಲ್ಲಿ ಬಂಧಿಸಲಾಗಿದೆ. ಶಂಕರ್ ಉಪಾಧ್ಯಾಯ ಎಂಬುವರು ನೀಡಿದ ದೂರಿನ ಆಧಾರದಲ್ಲಿ ಇಬ್ಬರು ಮಹಿಳೆಯರು, ಇಬ್ಬರು ಪುರುಷರನ್ನು ಪೊಲೀಸರು ಬಂಧಿಸಿದ್ದು ತನಿಖೆ ನಡೆಸುತ್ತಿದ್ದಾರೆ.
ವಂಚನೆ ಹೇಗೆ?
ಪೂನಂ ಎಂಬಾಕೆ ವಧುವಾಗಿ ಹಾಗೂ ಸಂಜನಾ ಗುಪ್ತಾ ಆಕೆಯ ತಾಯಿಯಾಗಿ ನಟಿಸುತ್ತಿದ್ದರು. ವಿಮಲೇಶ್ ವರ್ಮಾ ಹಾಗೂ ಧರ್ಮೇಂದ್ರ ಪ್ರಜಾಪತಿ ಎಂಬುವರು ಅವಿವಾಹಿತ ಪುರುಷರನ್ನು ಹುಡುಕಿ ಅವರಿಗೆ ಪೂನಂಳ ಪರಿಚಯ ಮಾಡಿಸುತ್ತಿದ್ದರು ಹಾಗೂ ಆ ಸಂಬಂಧವನ್ನು ಮುಂದುವರೆಸಲು ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು. ನಂತರ ಕೋರ್ಟ್ನಲ್ಲಿ ಸರಳವಾಗಿ ವಿವಾಹವಾಗಿ, ಪೂನಂ ವರನ ಮನೆ ಸೇರುತ್ತಿದ್ದಳು. ಅಲ್ಲಿ ಸಮಯ ಸಾಧಿಸಿ, ಹಣ ಹಾಗೂ ಆಭರಣಗಳನ್ನು ಎಗರಿಸಿ ಪರಾರಿಯಾಗುತ್ತಿದ್ದಳು ಹೀಗೆ 6 ಪುರುಷರನ್ನು ಈಗಾಗಲೇ ದೋಚಲಾಗಿತ್ತು.