ಬೆಂಗಳೂರು : ‘ಶಾಸಕ ಮುನಿರತ್ನ ಅವರ ಮೇಲೆ ಮೊಟ್ಟೆ ಎಸೆದಿರುವುದು, ಹಲ್ಲೆ ಮಾಡುವ ಪ್ರಯತ್ನ ನಡೆದಿರುವುದು ಸಣ್ಣ ಘಟನೆಯಲ್ಲ, ಅವರ ಮೇಲೆ ಒತ್ತಡ ಹಾಕಿ ಅವರು ರಾಜೀನಾಮೆ ಕೊಡಬೇಕು ಮರು ಚುನಾವಣೆ ನಡೆದು ತಮಗೆ ಬೇಕಾದವರನ್ನು ಗೆಲ್ಲಿಸಬೇಕು ಎಂಬ ಷಡ್ಯಂತ್ರ ಈ ಘಟನೆ ಹಿಂದಿದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗಂಭೀರವಾಗಿ ಆಪಾದಿಸಿದ್ದಾರೆ.
ಬುಧವಾರ ಸಂಜೆ ಆಸ್ಪತ್ರೆಯಲ್ಲಿದ್ದ ಮುನಿರತ್ನ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಹಿಂದೆ ಪಕ್ಷದ ಶಾಸಕ ಹರೀಶ್ ಪೂಂಜಾ ಅವರ ಮೇಲೆ ಕೂಡ ಬೋಗಸ್ ಕೇಸ್ ಹಾಕಿ ಅವರನ್ನು ಬಂಧಿಸಲು ಯತ್ನಿಸಿದ್ದರು. ಕಳೆದ ವಾರ ಶಾಸಕ ಸಿ.ಟಿ.ರವಿ ಅವರ ಪ್ರಕರಣದಲ್ಲಿ ಸದನದ ಹೊರಗಡೆ ಜನಪ್ರತಿನಿಧಿಯನ್ನು ಯಾವ ರೀತಿ ನಡೆಸಿಕೊಂಡಿದ್ದಾರೆ. ಪೊಲೀಸರ ದುರ್ಬಳಕೆ ಹೇಗೆ ಮಾಡಿಕೊಂಡಿದ್ದಾರೆ ಎಂಬುದನ್ನು ನೋಡಿದ್ದೀರಿ. ಸರ್ಕಾರ ಅಥವಾ ಸಚಿವರ ಹಸ್ತಕ್ಷೇಪ ಇಲ್ಲದೆ ಇದೆಲ್ಲಾ ಆಗಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು. ಮುನಿರತ್ನ ಅವರ ಜೊತೆಗಿರುವ ಕಾರ್ಯಕರ್ತರು, ಮುಖಂಡರು ನೊಂದುಕೊಂಡಿದ್ದಾರೆ. ಅವರ ಮೇಲೂ ಸುಳ್ಳು ಕೇಸು ದಾಖಲಿಸಲಾಗುತ್ತಿದೆ. ಹಳೆ ಕೇಸುಗಳನ್ನು ರೀ ಓಪನ್ ಮಾಡುತ್ತಿದ್ದಾರೆ. ಮಹಿಳೆಯರ ಮೇಲೂ ದೌರ್ಜನ್ಯ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು