ಬೀದರ್ : ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತನ ಹೆಸರು ಬರೆದು ಯುವ ಗುತ್ತಿಗೆದಾರ ಸಚಿನ್ ಪಂಚಾಳ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಹಾಗೂ ಸಚಿವ ಪ್ರಿಯಾಂಕ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಹೋರಾಟ ನಡೆಸಲು ಬಿಜೆಪಿ ಮುಂದಾಗಿದೆ
ಭಾಲ್ಕಿ ತಾಲೂಕಿನ ಕಟ್ಟಿ ತೂಗಾಂವದಲ್ಲಿರುವ ಸಚಿನ್ ಮನೆಗೆ ಭಾನುವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪಕ್ಷದ ನಾಯಕರ ಜೊತೆ ಸಭೆ ಮಾಡಿ ಹೋರಾಟ ರೂಪಿಸಲಾಗುವುದು ಎಂದರು. ಪ್ರಿಯಾಂಕ್ ರಾಜೀನಾಮೆ ಪಡೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಆಗ್ರಹಿಸಿದರು. ಇದೇ ವೇಳೆ ಪ್ರಿಯಾಂಕ್ ಪದತ್ಯಾಗ ಮಾಡುವವರೆಗೂ ಹೋರಾಟ ಮಾಡುವುದಾಗಿ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ತಿಳಿಸಿದ್ದಾರೆ
ಪ್ರಿಯಾಂಕ್ ಖರ್ಗೆ ನಮ್ಮ ಮೇಲೂ ಪ್ರಕರಣ ದಾಖಲಿಸುತ್ತಾರಂತೆ. ಅವರಿಗೆ ನಾಚಿಕೆಯಾ ಗಬೇಕು ಎಂದ ವಿಜಯೇಂದ್ರ, ಅವರಿಗೆ ಕಿಂಚಿತ್ತಾದರೂ ಮಾನ ಮರ್ಯಾದೆ ಇದ್ದರೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನಿಖೆಗೆ ಸಿದ್ಧರಾಗಬೇಕೆಂದು ಆಗ್ರಹಿಸಿದರು