Home » ಕಲಾವಿದರು ಮಾಶಾಸನ ಪಡೆಯಲು ಇರುವ ನಿಯಮ ಸಡಿಲವಾಗಲಿ
 

ಕಲಾವಿದರು ಮಾಶಾಸನ ಪಡೆಯಲು ಇರುವ ನಿಯಮ ಸಡಿಲವಾಗಲಿ

ಶಾಸಕ ಗುರುರಾಜ ಗಂಟಿ ಹೊಳೆ ಆಗ್ರಹ

by Kundapur Xpress
Spread the love

ಬೈಂದೂರು : ಹಿರಿಯ ಕಲಾವಿದರು ಹೊಸದಾಗಿ ಮಾಶಾಸನಕ್ಕೆ ಅರ್ಜಿ ಸಲ್ಲಿಸುವ ಸಂದರ್ಭ ಜಿಲ್ಲೆಯಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಕಚೇರಿಗೆ ತೆರಳಿ ಮಾಶಾಸನಕ್ಕೆ ಅರ್ಜಿ ಸಲ್ಲಿಸಬೇಕು. ಮತ್ತು ಹಲವು ದಾಖಲೆ ಹಾಗೂ ದೃಢೀಕರಣವನ್ನು ನೀಡಬೇಕಾಗುತ್ತದೆ. ಈ ನಿಯಮ ಇನ್ನಷ್ಟು ಸುಲಭಗೊಳಿಸಬೇಕು ಎಂದು ಶಾಸಕ ಗುರುರಾಜ್‌ ಶೆಟ್ಟಿ ಗಂಟಿಹೊಳೆ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಕಲಾವಿದರು ಆಯಾ ಅಕಾಡೆಮಿಗಳಿಗೆ ಹೋಗಿ ಸಂದರ್ಶನ ನಡೆದು, ಮತ್ತೆ ಬೆಂಗಳೂರಿನ ಕಚೇರಿಗೆ ತಲುಪಿ ಅಲ್ಲಿಂದ ಸರಕಾರಕ್ಕೆ ಸಲ್ಲಿಕೆಯಾಗಿ ಹಣಕಾಸು ಇಲಾಖೆಯಿಂದ ಮಂಜೂರಾತಿ ಆಗಬೇಕಾದರೆ ಸಮಯ ವಿಳಂಬವಾಗಿ ಹಿರಿಯ ಕಲಾವಿದರು ಕನಿಷ್ಠ ಮಾಸಿಕ ಪಿಂಚಣಿ ಗಾಗಿ ವರ್ಷಾನುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ. ಇದರಿಂದ ಹಿರಿಯ ಕಲಾವಿದರಿಗೆ ತೊಂದರೆ ಉಂಟಾಗುತ್ತಿರುವುದರಿಂದ ಮಾಶಾಸನಕ್ಕೆ ಅರ್ಜಿ ಹಾಕುವಲ್ಲಿ ಇರುವ ಅನಗತ್ಯ ಪ್ರಕ್ರಿಯೆ ಗಳನ್ನು ಸಡಿಲೀಕರಣ ಗೊಳಿಸಿ ಮಾಶಾಸನ ತ್ವರಿತವಾಗಿ ದೊರಕಲು ಇಲಾಖಾ ನಿಯಮಗಳಲ್ಲಿ ಅಗತ್ಯ ಬದಲಾವಣೆ ಮಾಡಲು ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು.
ಕೋವಿಡ್ ಕಾಲದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಇಲ್ಲದೇ ಕಲಾವಿದರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದು ಆ ಸಂಕಷ್ಟದಿಂದ ಈಗಲೂ ಹೊರ ಬಂದಿಲ್ಲ. ಈಗಲೂ ಕನಿಷ್ಠ ಮಾಶಾಸನ ಪಡೆಯುತ್ತಿರುವ ಹಿರಿಯ ಕಲಾವಿದರ ಜೀವನ ದುಸ್ತರವಾಗಿದೆ.ಮಾಶಾಸನ ಹೆಚ್ಚಳಕ್ಕೆ ಈ ಹಿಂದೆಯೇ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದರೂ ಆರ್ಥಿಕ ಇಲಾಖೆ ಆ ಕಡತವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವಾಪಾಸ್ಸು ಕಳುಹಿಸಿದೆ. ಇಲಾಖೆ ಪೂರಕ ಮಾಹಿತಿಗಳೊಂದಿಗೆ ಕಳೆದ ಅಕ್ಟೋಬರ್ ನಲ್ಲಿ ಹಣ ಕಾಸು ಇಲಾಖೆಗೆ ಮರು ಮಂಡಿಸಲಾಗಿದ್ದರೂ ಈವರೆಗೂ ಆ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಮಂಜೂರಾತಿ ನೀಡದೇ ಇರುವುದು ಸರಕಾರ ಹಿರಿಯ ಕಲಾವಿದರಿಗೆ ನೀಡಿರುವ ಅಗೌರವ ಎಂದು ಶಾಸಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಹಾಗೂ ಪ್ರಸಕ್ತ ಇರುವ ರೂ.2000 ಮೊತ್ತದ ಮಾಸಶನ ವನ್ನು ಪ್ರಸ್ತಾವನೆ ಇದ್ದಂತೆ ರೂ.3000ಕ್ಕೆ ಏರಿಸಿ ಉಡುಪಿ ಜಿಲ್ಲೆಯಲ್ಲಿರುವ 71ಜನ ಸೇರಿದಂತೆ ರಾಜ್ಯದಲ್ಲಿರುವ 13,108 ಹಿರಿಯ ಕಲಾವಿದರಿಗೆ ನೆಮ್ಮದಿಯ ಜೀವನ ಒದಗಿಸಲು ಮಾನ್ಯ ಬೈಂದೂರು ಶಾಸಕರು ಹಣಕಾಸು ಇಲಾಖೆ ಹೊಣೆ ಹೊತ್ತಿರುವ ಮಾನ್ಯ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದ್ದಾರೆ ಹಾಗೂ ಪತ್ರ ಮುಖೇನ ಮನವಿ ಮಾಡಿದ್ದಾರೆ*.

 

Related Articles

error: Content is protected !!