ತಿರುಪತಿ : ತಿರುಮಲದಲ್ಲಿ ಬುಧವಾರ ಸಂಜೆ ಸಂಭವಿಸಿದ ಭೀಕರ ಕಾಲ್ತುಳಿತಕ್ಕೆ, ಅಸ್ವಸ್ಥ ಮಹಿಳೆಯನ್ನು ಕರೆದೊಯ್ಯಲು ಗೇಟ್ ತೆರೆದಿದ್ದೇ ಕಾರಣ ಎಂದು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳಿಂದ ತಿಳಿದುಬಂದಿದೆ.
‘ಟಿಕೆಟ್ಗಾಗಿ ಹಲವು ಗಂಟೆಗಳಿಂದ ಅನೇಕ ಕೌಂಟರ್ ಗಳಲ್ಲಿ ಜನ ಕಾದಿದ್ದರು. ಅಂಥದ್ದರಲ್ಲಿ ಬೈರಾಗಿ ಪಟ್ಟಿಡಾ ಪಾರ್ಕ್ನಲ್ಲಿನ ಟೋಕನ್ ಕೌಂಟರ್ ಒಂದರಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ ಮಲ್ಲಿಕಾ (ಇವರು ಮೃತ ಮಹಿಳೆಯಲ್ಲಿ ಒಬ್ಬರು) ಎಂಬ ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ಅಸ್ವಸ್ಥರಾದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಗೇಟ್ಗಳನ್ನು ತೆರೆಯಲಾಯಿತು. ಆದರೆ ಟಿಕೆಟ್ ಕೌಂಟರ್ ಗೇಟನ್ನೇ ತೆರೆಯಲಾಗಿದೆ ಎಂದು ಭಾವಿಸಿದ 5 ಸಾವಿರ ಮಂದಿ ನಾಮುಂದು ತಾಮುಂದು ಎಂದು ಕೌಂಟರ್ನತ್ತ ಮುಗಿಬಿದ್ದರು. ಇಷ್ಟೊಂದು ಜನ ಏಕಾಏಕಿ ಒಳ ನುಗ್ಗಿದ್ದು ಕಾಲ್ತುಳಿತಕ್ಕೆ ಕಾರಣ ವಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.