ಬೆಂಗಳೂರು : ಕೇಂದ್ರ ಸರ್ಕಾರ ಮಾನದಂಡಗಳ ಅನುಸಾರ ಬಿಪಿಎಲ್ ಕಾರ್ಡು ಹೊಂದಲು ಅರ್ಹರಲ್ಲವೋ ಅಂಥವರನ್ನು ಹಂತ ಹಂತವಾಗಿ ಗುರುತಿಸಿ ಅವರ ಪಡಿತರ ಚೀಟಿಗಳನ್ನು ರದ್ದು ಮಾಡಿ. ಆದರೆ ಯಾವೊಬ್ಬ ಅರ್ಹರ ಬಿಪಿಎಲ್ ಕಾರ್ಡು ರದ್ದಾಗದಂತೆ ಎಚ್ಚರವಹಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವರು ಹಾಗೂ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ
ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ಆಹಾರ ಸರಬರಾಜು, ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನಶಾಸ್ತ್ರ ಇಲಾಖಾ ಪ್ರಗತಿ ಪರಿಶೀಲನೆ ನಡೆಸಿ ಈ ಸೂಚನೆ ನೀಡಿದ್ದಾರೆ.
ಸಭೆಯ ಆರಂಭದಲ್ಲಿ ಇಲಾಖಾ ಸಚಿವ ಕೆ.ಎಚ್.ಮುನಿಯಪ್ಪ ಅವರು, ಈಗಾಗಲೇ ನಾಲ್ಕು ಸಾವಿರ ಸರ್ಕಾರಿ ನೌಕರರನ್ನು ಬಿಪಿಎಲ್ ಕಾರ್ಡುದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಸರ್ಕಾರಿ ನೌಕರರಲ್ಲದೆ ಆದಾಯ ತೆರಿಗೆ ವ್ಯಾಪ್ತಿಗೆ ಬರುವವರು ಸೇರಿ ಕೇಂದ್ರ ಸರ್ಕಾರದ ಮಾನದಂಡಗಳನ್ನು ಹೊಂದಿಲ್ಲದ ಲಕ್ಷಾಂತರ ಕುಟುಂಬಗಳು ಬಿಪಿಎಲ್ ಕಾರ್ಡುಗಳನ್ನು ಹೊಂದಿರುವುದು ಇಲಾಖಾ ಪರಿಶೀಲನೆಯಲ್ಲಿ ಕಂಡುಬಂದಿದೆ. ಆದರೆ ಅವುಗಳನ್ನು ರದ್ದುಪಡಿಸಲು ಮುಂದಾದಾಗ ಪ್ರತಿಪಕ್ಷದವರು ವಿವಾದ ಸೃಷ್ಟಿಸಿ ರಾಜಕೀಯವಾಗಿ ಈ ವಿಷಯ ಬಳಸಿಕೊಳ್ಳಲು ಮುಂದಾಗಿದ್ದರಿಂದ ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆ. ತಾವು ಅನುಮತಿ ನೀಡಿದರೆ ಅನರ್ಹರ ಬಿಪಿಎಲ್ ಕಾರ್ಡು ರದ್ದು ಮಾಡುವ ಕೆಲಸ ಮುಂದುವರೆಯಲಿದೆ ಎಂದು ತಿಳಿಸಿದರು