ಬೆಂಗಳೂರು : ನೆತ್ತರ ಹೋರಾಟದ ಹಾದಿ ತೊರೆದು ಆರು ಮಂದಿ ನಕ್ಸಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಶರಣಾದರೂ ತಮ್ಮ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸಿಲ್ಲ ಎಂದು ತಿಳಿದು ಬಂದಿದೆ ಭವಿಷ್ಯ ದಲ್ಲಿ ಕಾನೂನು ಸಂಕಷ್ಟಕ್ಕೆ ಸಿಲುಕಬಹುದೆಂಬ ಆತಂಕದಿಂದ ಶಸ್ತ್ರಾಸ್ತ್ರ ಗಳನ್ನು ಅವರು ಕಾಡಿನಲ್ಲೇ ಅಡಗಿಸಿಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ.
ಶಸ್ತ್ರಾಸ್ತ್ರಗಳ ಕುರಿತು ಶರಣಾಗತ ನಕ್ಸಲರು ಇದೀಗ ಪೊಲೀಸರಿಗೆ ಮಾಹಿತಿ ನೀಡಿದ್ದು ಇನ್ನೆರೆಡು ದಿನಗಳಲ್ಲಿ ಚಿಕ್ಕಮಗಳೂರು ಶೃಂಗೇರಿ ತಾಲೂಕಿನ ದಟ್ಟ ಕಾನನದಲ್ಲಿ ಹುದುಗಿಸಿಟ್ಟಿರುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯುವ ಕಾರ್ಯ ನಡೆಯಲಿದೆ. ಈ ನಕ್ಸಲರ ಬಳಿ ಪಿಸ್ತೂಲ್ ಮಾತ್ರವಲ್ಲದೆ, ಅತ್ಯಾಧುನಿಕ ಶಸ್ತ್ರಾಸ್ತ್ರಗಳಿವೆ. ಆದರೆ ಅವು ಯಾವ ಮಾದರಿಯವು ಎಂಬುದು ಮಹಜರ್ ನಂತರವೇ ಖಚಿತವಾಗಲಿದೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ
ಎರಡು ತಿಂಗಳ ಹಿಂದೆ ಉಡುಪಿ ಜಿಲ್ಲೆ ಹೆಬ್ರಿಯ ಕಬ್ಬಿನಾಲೆ ಪೀತಬೈಲು ಸಮೀಪ ನಕ್ಸಲ್ ನಾಯಕ ವಿಕ್ರಂಗೌಡನನ್ನು ನಕ್ಸಲ್ ನಿಗ್ರಹ ಪಡೆ ಎನ್‌ಕೌಂಟರ್‌ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು