ಅಯೋಧ್ಯೆ : ರಾಮನಗರಿ ಅಯೋಧ್ಯೆಯಲ್ಲಿ ರಾಮಲಲಾ ಪ್ರಾಣ ಪ್ರತಿಷ್ಠೆಯ ಪ್ರಥಮ ವರ್ಧಂತಿ ಮತ್ತು ಪ್ರತಿಷ್ಠಾ ದ್ವಾದಶಿಯನ್ನು ಶನಿವಾರ ಅದ್ದೂರಿಯಾಗಿ ಆಚರಿಸಲಾಯಿತು. ದರುಶನ ಪಡೆದ ಲಕ್ಷಾಂತರ ರಾಮಭಕ್ತರ ಹೃದಯದಲ್ಲಿ, ನಾಲಗೆಯಲ್ಲಿ ಶ್ರೀರಾಮ ನಾಮದೊಂದಿಗೆ ಇಡೀ ವಾತಾವರಣವೇ ರಾಮಮಯವಾಗಿತ್ತು.
ಯಜುರ್ವೇದ ಪಠಣದೊಂದಿಗೆ ಪ್ರತಿಷ್ಟಾ ದ್ವಾದಶಿ ಆಚರಣೆ ಆರಂಭವಾಯಿತು. ಶನಿವಾರ ಮುಂಜಾನೆ 4.30ಕ್ಕೆ ಮಂಗಲ ಆರತಿ ಮಾಡಿದ ಮಂದಿರದ ಅರ್ಚಕರು ನಂತರ ರಾಮಲಲಾಗೆ ಪಂಚಾಮೃತ ಅಭಿಷೇಕ ನೆರವೇರಿಸಿದರು. ಮೊದಲು ಕ್ಷೀರ, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಕ್ಕರೆಯಿಂದ ಅಭಿಷೇಕ ಮಾಡಲಾಯಿತು. ಬಳಿಕ ಗಂಗಾಜಲ ಅಭಿಷೇಕ ನಡೆಯಿತು. ತರುವಾಯ ರಾಮಲಲಾಗೆ ಶೃಂಗಾರ ಮಾಡಲಾಯಿತು. ರಾಮಲಲಾಗೆ ಚಿನ್ನದ ಎಳೆಯುಳ್ಳ ಹಳದಿ ವರ್ಣದ ವಸ್ತ್ರ ಮತ್ತು ವಜ್ರದ ಕಿರೀಟ ತೊಡಿಸಲಾಯಿತು. ಪ್ರತಿಷ್ಠಾ ದ್ವಾದಶಿಗೆ ರಾಮಲಲಾಗೆ ಚಿನ್ನದ ಕಂಠೀಹಾರ ಉಡುಗೊರೆ ನೀಡಲಾಗಿದೆ
ಬಂಗಾರದ ಹೊಸ ಹಾರದೊಂದಿಗೆ ಕಂಗೊಳಿಸುತ್ತಿದ್ದ ಕಳೆದ ವರ್ಷ ಪ್ರಾಣ ಪ್ರತಿಷ್ಠೆಯಾದ ಶುಭ ಸಮಯ ಮಧ್ಯಾಹ್ನ 12.20ಕ್ಕೆ ಈ ಬಾರಿಯೂ ರಾಮಲಲಾ ಭಕ್ತರಿಗೆ ಭವ್ಯ ದರ್ಶನ ನೀಡಿದ್ದು ಮಹಾ ಆರತಿ ನಡೆಸಲಾಯಿತು. ಬಳಿಕ ಬಳಿಕ 56 ಖಾದ್ಯಗಳನ್ನು ದೇವರಿಗೆ ನೈವೇದ್ಯ (ಭೋಗ್) ಅರ್ಪಿಸಲಾಯಿತು
ಮುಂಜಾನೆ 6.30ರಿಂದ ರಾತ್ರಿ 9.30ರವರೆಗೆ ನಿರಂತರವಾಗಿ ಭಕ್ತರಿಗೆ ದರ್ಶನದ ವ್ಯವಸ್ಥೆ ಮಾಡಲಾಗಿತ್ತು ನೈವೇದ್ಯದ ಸಮಯ ಹೊರತುಪಡಿಸಿ ಉಳಿದೆಲ್ಲ ಸಮಯದಲ್ಲಿ ದರ್ಶನ ನಿರ್ವಿಘ್ನವಾಗಿತ್ತು.
`ದರ್ಶನ ಪಡೆಯುತ್ತಿದ್ದ ಭಕ್ತರು ರಾಮಲಲಾಗೆ ಮಾಡುತ್ತಿದ್ದ ಅಭಿಷೇಕ, ಅಲಂಕಾರ ಮತ್ತು ಆರತಿಯನ್ನು ಕೂಡ ಕಣ್ಣುಂಬಿಕೊಂಡರು. ಮಂದಿರಕ್ಕೆ ಆಗಮಿಸುತ್ತಿದ್ದ ಭಕ್ತರು ರಾಮಲಲಾಗೆ ಜಯ ಘೋಷಣೆ ಮೊಳಗಿಸುತ್ತಿದ್ದರು. ಭಕ್ತರೆಲ್ಲರಿಗೂ ರಾಮ ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಲಾಗಿತ್ತು. ಅಯೋಧ್ಯೆ ನಗರದ ಅಲ್ಲಲ್ಲಿ ಭಕ್ತರು ಭಕ್ತಿಯಿಂದ ಭಜನೆ, ಕೀರ್ತನೆ ನಡೆಸುತ್ತಿದ್ದುದು ಕಂಡುಬಂತು