ಚಿಕ್ಕಮಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮ್ಮುಖದಲ್ಲಿ ಶರಣಾಗತರಾದ ಆರು ಮಂದಿ ನಕ್ಸಲೀಯರು ಹುದುಗಿಸಿಟ್ಟಿದ್ದ ಶಸ್ತ್ರಾಸ್ತ್ರಗಳು ಮತ್ತು ಮದ್ದು ಗುಂಡುಗಳನ್ನು ಜಯಪುರ ಠಾಣೆ ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ ಅಮಟೆ ಈ ವಿಚಾರವನ್ನು ತಿಳಿಸಿದ್ದು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿರುವ ಸಿಬ್ಬಂದಿ ಶುಕ್ರವಾರ ರಾತ್ರಿ 11.30ರ ವೇಳೆಗೆ ಜಯಪುರದ ಮೇಗುಂದಾ ಅರಣ್ಯ ವ್ಯಾಪ್ತಿಯ ಕಿತ್ತಲೆಗುಳಿ ಎಂಬಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ತಿಳಿಸಿದ್ದಾರೆ.
ಶರಣಾಗತರಾದ ಆರೂ ಮಂದಿ ನಕ್ಸಲರು ಇದೇ ಅರಣ್ಯದಲ್ಲಿ ತಂಗಿದ್ದು ಅಲ್ಲಿಂದಲೇ ಬೆಂಗಳೂರಿಗೆ ಶರಣಾಗತಿಗೆ ಪ್ರಯಾಣಿಸಿದ್ದರು. ಮಣ್ಣಿನಲ್ಲಿ ಹೂತಿಡಲಾಗಿದ್ದ 1 ಎಕೆ-56 ಬಂದೂಕು, 303 ಮಾಡೆಲ್‌ನ 3 ರೈಫಲ್‌ಗಳು, 1 ಎಸ್‌ಬಿಬಿಎಲ್ ಗನ್ ಹಾಗೂ । ಸ್ವದೇಶಿ ನಿರ್ಮಿತ ಪಿಸ್ತೂಲ್ ಸೇರಿ ಒಟ್ಟು 6 ಶಸ್ತ್ರಾಸ್ತ್ರ ಗಳನ್ನು ವಶಕ್ಕೆ ಪಡೆಯಲಾಗಿದೆ.
ಇದರೊಂದಿಗೆ 7.62 ಎಂಎಂನ ಎಕೆ ಮದ್ದು ಗುಂಡುಗಳು 11, 303 ಮಾಡೆಲ್ ರೈಫ್‌ನ 133 ಮದ್ದು ಗುಂಡುಗಳು, 24 ಕ್ಯಾಟ್ರಿಡ್‌ಗಳು ಹಾಗೂ ಸ್ವದೇಶಿ ನಿರ್ಮಿತ ಪಿಸ್ತೂಲ್‌ನ 8 ಗುಂಡುಗಳು ಸೇರಿ ಒಟ್ಟು 176 ಮದ್ದು ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಸ್ತ್ರಾಸ್ತ್ರ ಕಾಯ್ದೆ 1959ರ 3, 25(1ಬಿ), 7 ಮತ್ತು 25(1ಎ) ಪ್ರಕಾರ ಮೊಕದ್ದಮೆ ದಾಖಲಿಸಲಾಗಿದೆ. ಎಂದು ತಿಳಿಸಿದ್ದಾರೆ.