52. ಆತ್ಮೋನ್ನತಿಯ ಮಾರ್ಗ
ಆತ್ಮಜ್ಞಾನದ ಬೆಳಕಲ್ಲಿ ಬದುಕಿನ ಉನ್ನತಿಯ ಮಾರ್ಗವನ್ನು ಕಂಡುಕೊಳ್ಳಬೇಕೆಂದರೆ ನಮ್ಮನ್ನು ನಾವು ಅರಿಯುವ ಕೆಲಸವನ್ನು ಮೊತ್ತಮೊದಲಾಗಿ ಮಾಡಬೇಕು. ಪ್ರಾಯಶಃ ನಾವು ಬದುಕಿನ ಉದ್ದಕ್ಕೂ ಮಾಡದಿರುವ ಕೆಲಸವೆಂದರೆ ಇದೊಂದೇ. ವಾಸ್ತವವಾಗಿ ನಮ್ಮ ಬಂಧು – ಮಿತ್ರರನ್ನು, ಹಿತೈಷಿಗಳನ್ನು ನಾವು ತಿಳಿದ್ದೇವೆ ಎಂದುಕೊಂಡಷ್ಟು ನಮ್ಮನ್ನು ನಾವು ತಿಳಿದಿರುವುದಿಲ್ಲ. ಎಷ್ಟೆಂದರೆ ನಮ್ಮ ಶತ್ರುಗಳ ಬಗೆಗೂ ನಮಗೆ ಸಾಕಷ್ಟು ಕಾಳಜಿ, ಮಾಹಿತಿ, ತಿಳಿವಳಿಕೆ ಇರುತ್ತದೆ. ಯಾವ ಯಾವ ಸಂದರ್ಭಗಳಲ್ಲಿ ನಮ್ಮ ಬಂಧು – ಮಿತ್ರರು. ಹಿತೈಷಿಗಳು, ಶತ್ರುಗಳು ನಮ್ಮೊಂದಿಗೆ ಹೇಗೆ ವರ್ತಿಸುತ್ತಾರೆ ಎಂಬ ಗ್ರಹಿಕೆ, ಲೆಕ್ಕಚಾರವೂ ನಮ್ಮಲ್ಲಿ ಸಿದ್ಧವಾಗಿರುತ್ತದೆ. ಅವರ ನಡೆ – ನುಡಿ, ವ್ಯಕ್ತಿತ್ವ ಎಷ್ಟು ಖೋಟಾ ಎಂಬ ಬಗ್ಗೆಯೂ ನಮಗೆ ‘ನಿಖರ’ವಾಗಿ ತಿಳಿದಿರುತ್ತದೆ. ಆದರೆ ನಾವು ಅವರೊಂದಿಗೆ ಹೇಗೆ ವರ್ತಿಸುತ್ತೇವೆ, ಹೇಗೆ ವ್ಯವಹರಿಸುತ್ತೇವೆ ಎಂಬ ಬಗ್ಗೆ ಮಾತ್ರ ನಮಗೆ ಅರಿವಿರುವುದಿಲ್ಲ! ನಮ್ಮ ವರ್ತನೆಗಳು, ನಡೆ – ನುಡಿಗಳು ಅವರ ದೃಷ್ಟಿಯಲ್ಲಿ ಸಮಂಜಸವಾಗಿರುತ್ತವೆಯೇ, ವಕ್ರವಾಗಿರುತ್ತವೆಯೇ ಎಂಬ ಬಗ್ಗೆಯೂ ನಾವು ಯೋಚಿಸುಸುವುದಿಲ್ಲ. ಮನುಷ್ಯನ ಮೂಲಭೂತ ಗುಣವೆಂದರೆ ಆತನಿಗೆ ಇತರರ ನಡೆ – ನುಡಿ, ವ್ಯಕ್ತಿತ್ವ, ವ್ಯವಹಾರಗಳಲ್ಲಿ ಮಾತ್ರವೇ ಲೋಪ – ದೋಷಗಳು ಕಾಣಿಸಿಕೊಳ್ಳುವುದು. ಇತರರೊಂದಿಗೆ ತಾನು ನಡೆದುಕೊಳ್ಳುವ ರೀತಿಯಲ್ಲಾಗಲೀ ತನ್ನ ನಡೆ – ನುಡಿ, ವ್ಯಕ್ತಿತ್ವದಲ್ಲಾಗಲೀ ಆತನಿಗೆ ಯಾವ ಲೋಪ – ದೋಷಗಳೂ ಕಾಣಿಸಿಕೊಳ್ಳುವುದಿಲ್ಲ. ಮಾತ್ರವಲ್ಲ ಆ ಬಗ್ಗೆ ಆತನಲ್ಲಿ ಯಾವ ಸಂದೇಹವೂ ಏಳುವುದಿಲ್ಲ! ಪರಿಣಾಮವಾಗಿ ಎಲ್ಲರೊಡನೆ ಕೋಪ, ವಿರಸ, ಸಂಘರ್ಷ, ಭಿನ್ನಾಭಿಪ್ರಾಯ. ಹಾಗಿದ್ದರೆ ಇದಕ್ಕೆ ಪರಿಹಾರವೇನು? ನಮ್ಮನ್ನು ನಾವು ಅರಿಯಲು ಯತ್ನಿಸುವುದು. ಆತ್ಮಜ್ಞಾನದ ಬೆಳಕಿನಲ್ಲಿ ಬದುಕಿನ ಉನ್ನತಿಯ ಮಾರ್ಗವನ್ನು ಕ್ರಮಿಸುವುದು!