ಉಡುಪಿ :ಆತ್ಮ ವಿಶ್ವಾಸ, ಪ್ರಾಮಾಣಿಕತೆ ಮತ್ತು ಸತತ ಪರಿಶ್ರಮವಿದ್ದಾಗ ಮಾತ್ರ ವಿದ್ಯಾರ್ಥಿಗಳು ಗೆಲುವನ್ನು ಸಾಧಿಸಬಹುದು. ನಮ್ಮೊಳಗಿನ ಹಿಂಜರಿಕೆಗೆ ನಾವೇ ಉತ್ತರ ಕಂಡುಕೊಳ್ಳಲು ಸಾಧ್ಯವಿಲ್ಲ ಎನ್ನುವವರ ಎದುರು ಅಸಾಧ್ಯವನ್ನ ಸಾಧಿಸಿ ತೋರಿಸುವವರಾಗಬೇಕು. ನಮ್ಮ ತಂದೆ ತಾಯಿಗಳ ಪ್ರೀತಿ ಆದರಗಳಿಗೆ ಪಾತ್ರರಾಗಿ ಪ್ರಬುದ್ಧ ವ್ಯಕ್ತಿಗಳಾಗಬೇಕೆಂದು ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ, ಸಾಹಿತಿ ನರೇಂದ್ರ ಕುಮಾರ್ ಕೋಟ ಹೇಳಿದರು. ಅವರು ಇತ್ತೀಚಿಗೆ ಕಟಪಾಡಿಯ ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತ್ರಿಶಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಸಿಎ ಗೋಪಾಲಕೃಷ್ಣ ಭಟ್ ಮಾತನಾಡುತ್ತಾ ನಮ್ಮ ಉದ್ಯೋಗ ಸಂಪಾದನೆಯ ಜೊತೆ ಈ ದೇಶ ಕಟ್ಟುವ ಮೌಲ್ಯ ತುಂಬಿದ ನಾಗರಿಕನಾಗಬೇಕು ಎಂದರು. ಕಾರ್ಯಕ್ರಮದಲ್ಲಿ ನವೆಂಬರ್ 2024 ರಲ್ಲಿ ಉತ್ತೀರ್ಣರಾದ ಸಿ ಎ ಫೈನಲ್ ವಿದ್ಯಾರ್ಥಿಗಳನ್ನು ಹೆತ್ತವರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಅನಂತ್ ಪೈ ವಾರ್ಷಿಕವರದಿ ಮಂಡಿಸಿದರು. ಕಾರ್ಯಕ್ರಮದಲ್ಲಿ ಕ್ರೀಡೆ, ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಿದ್ಧಾಂತ್ ಪೌಂಡೇಶನ್ ಟ್ರಸ್ಟಿ ರಾಮ್ ಪ್ರಭು ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಅಕ್ಷಯ ನಿರೂಪಿಸಿ, ಕನ್ನಡ ಪ್ರಾಧ್ಯಾಪಕ ಧೀರಜ್ ಸ್ಬಾಗತಿಸಿ, ಗಣಿತ ಉಪನ್ಯಾಸಕಿ ವಿನುತ ವಂದಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು.