ಹೊಸದಿಲ್ಲಿ : ಭಯೋತ್ಪಾದನೆಯನ್ನು ಪ್ರಾಯೋಜಿಸುವ ಮೂಲಕ ಭಾರತವನ್ನು ಅಸ್ಥಿರಗೊಳಿಸಲು ಪಾಕಿಸ್ತಾನ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಆರೋಪಿಸಿದ್ದಾರೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ತನ್ನ ಭಯೋತ್ಪಾದಕ ಮೂಲಸೌಕರ್ಯವನ್ನು ನಾಶಪಡಿಸಬೇಕು ಇಲ್ಲದಿದ್ದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಪಿಒಕೆ ಇಲ್ಲದೆ ಜಮ್ಮು -ಕಾಶ್ಮೀರ ಅಪೂರ್ಣವಾಗಿದೆ ಎಂದು ಪ್ರತಿಪಾದಿಸಿದ ಸಿಂಗ್, ಈ ಪ್ರದೇಶವನ್ನು ಭಯೋತ್ಪಾದನೆಯ ಕೇಂದ್ರವಾಗಿ ಬಳಸಲಾಗುತ್ತಿದೆ. ಪಾಕಿಸ್ತಾನದ ಭೂಮಿ ತರಬೇತಿ ಶಿಬಿರಗಳು ಮತ್ತು ಒಳನುಸುಳುವಿಕೆ ಚಟುವಟಿಕೆಗಳಿಗೆ ಉಡಾವಣಾ ಪ್ಯಾಡ್ ಗಳಿಗೆ ನೆಲೆಯಾಗಿದೆ ಎಂದು ಹೇಳಿದರು
ಪಿಒಕೆ ಜನರು ಗೌರವಯುತ ಜೀವನದಿಂದ ವಂಚಿತರಾಗಿದ್ದಾರೆ. ಪಾಕಿಸ್ತಾನದ ಆಡಳಿತಗಾರರು ತಮ್ಮ ಭಾರತ ವಿರೋಧಿ ಕಾರ್ಯಸೂಚಿಯನ್ನು ಮುಂದುವರಿಸಲು ಧರ್ಮದ ಹೆಸರಿನಲ್ಲಿ ಅವರನ್ನು ಶೋಷಿಸಿದ್ದಾರೆ ಎಂದು ಸಿಂಗ್ ಹೇಳಿದರು.
ಪಿಒಕೆ ಪ್ರಧಾನಿ ಅನ್ವರ್-ಉಲ್-ಹಕ್ ಅವರ ಇತ್ತೀಚಿನ ಹೇಳಿಕೆಗಳನ್ನು ಸಿಂಗ್ ಖಂಡಿಸಿದ್ದಾರೆ. ಇದು ಜನರಲ್ ಜಿಯಾ-ಉಲ್-ಹಕ್ ಯುಗದಿಂದಲೂ ಪೋಷಿಸಿದ ಪಾಕಿಸ್ತಾನದ ಭಾರತ ವಿರೋಧಿ ಕಾರ್ಯಸೂಚಿಯ ಮುಂದುವರಿಕೆ ಎಂದು ಹೇಳಿದರು.