ಬೈಂದೂರು : ಬೈಂದೂರು ತಾಲ್ಲೂಕು ಕಚೇರಿಯಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ ಅವರು ದಿನಾಂಕ 16.01.2024 ರಂದು ಬಗರ್ ಹುಕುಂ ಅಕ್ರಮ ಸಕ್ರಮ ಸಭೆ ನಡೆಸಿ, ಸಾಗುವಳಿ ಚೀಟಿ ಮಂಜೂರಾತಿ ಮಾಡಿದರು.
ಸಭೆಯಲ್ಲಿ ಅಕ್ರಮ ಸಕ್ರಮಕ್ಕೆ ಸಂಬಂಧಿಸಿದಂತೆ ಹಳ್ಳಿಹೊಳೆ ಗ್ರಾಮದ 06 ಕಡತ, ಜಡ್ಕಲ್ ಗ್ರಾಮದ 06 ಕಡತ, ಮುದೂರು ಗ್ರಾಮದ 05 ಕಡತ ಹಾಗೂ ನಾಡ ಗ್ರಾಮದ 01 ಕಡತ ಸೇರಿ ಒಟ್ಟು 18 ಕಡತಗಳನ್ನು ಸಮಿತಿ ಸಭೆಯ ಮುಂದಿಟ್ಟು ಎಲ್ಲಾ ಕಡತಗಳನ್ನು ಮಂಜೂರಾತಿ ನೀಡಿ ಮುಂದಿನ ಹಂತದ ಕ್ರಮಕ್ಕೆ ಶಾಸಕರು ಕಳುಹಿಸಿದ್ದಾರೆ.
ಸಭೆಯಲ್ಲಿ ಮಾತನಾಡಿದ ಶಾಸಕರು, ಕಳೆದ ಹಲವು ವರ್ಷಗಳಿಂದ ಕೃಷಿ ಮಾಡಿಕೊಂಡು ಬಂದವರಿಗೆ ಸಾಗುವಳಿ ಚೀಟಿ ನೀಡುವ ಪ್ರಕ್ರಿಯೆ ಕಳೆದ 7 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು ಪ್ರಸ್ತುತ ಮೊದಲ ಹಂತದಲ್ಲಿ ಅರ್ಹರನ್ನು ಗುರುತಿಸಿ ಹಕ್ಕು ಪತ್ರ ಮಂಜೂರಾತಿಗೆ ಕ್ರಮವಹಿಸಲಾಗುತ್ತದೆ. ಅದರಂತೆ ಇಂದಿನ ಸಭೆಯಲ್ಲಿ ಬೈಂದೂರಿನ 04 ಗ್ರಾಮಗಳ ಅರ್ಹ 18 ಸಾಗುವಳಿದಾರರಿಗೆ ಸಾಗುವಳಿ ಚೀಟಿ ಮಂಜೂರು ಮಾಡಲಾಗಿದೆ. ಉಳಿದಂತೆ ಅತೀ ಶೀಘ್ರದಲ್ಲಿ ಪ್ರತಿ ವಾರ ಬಗರ್ ಹುಕುಂ ಸಮಿತಿ ಸಭೆಗಳನ್ನು ನಡೆಸಿ ಎಲ್ಲಾ ಸಾಗುವಳಿದಾರರಿಗೆ ಭೂಮಿ ಹಕ್ಕು ಪತ್ರ ನೀಡಲಾಗುವುದು ಎಂದರು. ಉಳಿದಂತೆ ಈ ಹಿಂದೆ ನೀಡಿದ ಹಲವು ಸಾಗುವಳಿ ಚೀಟಿಗೆ ಸಂಬಂಧಿಸಿದಂತೆ ತಿದ್ದುಪಡಿಯ ಅರ್ಜಿಗಳು ಸಾಕಷ್ಟು ಇರುವುದರಿಂದ ಅದನ್ನೂ ಕೂಡ ಸಮಿತಿಯ ಮುಂದಿಟ್ಟು ಸರಿ ಪಡಿಸಲು ಕ್ರಮ ವಹಿಸುವುದಾಗಿ ತಿಳಿಸಿದರು*
ಸಮಾಜದ ಅತ್ಯಂತ ನಿರ್ಲಕ್ಷ ಸಮುದಾಯವಾದ 04 ಕೊರಗ ಕುಟುಂಬಗಳಿಗೆ ಪ್ರಥಮತವಾಗಿ ಸಾಗುವಳಿ ಚೀಟಿ ಮಂಜೂರು ಮಾಡಿರುವುದು ವಿಶೇಷವಾಗಿತ್ತು. ಮುದೂರು ಹಾಗೂ ಹಳ್ಳಿಹೊಳೆ ಗ್ರಾಮಗಳ 04 ಕುಟುಂಬವು ಹಲವು ವರ್ಷಗಳಿಂದ ಸರಕಾರಿ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡು ಬಂದಿದ್ದು, ಕೊರಗ ಕುಟುಂಬಗಳ ಹಲವು ವರ್ಷಗಳ ಭೂಮಿ ಹಕ್ಕಿನ ಕಾಯುವಿಕೆಗೆ ಇಂದು ಮುಕ್ತಿ ಸಿಕ್ಕಂತಾಗಿದೆ.
ಸಭೆಯಲ್ಲಿ ಬೈಂದೂರು ಬಗರ್ ಹುಕುಂ ಸಮಿತಿ ಸದಸ್ಯರಾದ ಪ್ರದೀಪ್ ಶೆಟ್ಟಿ, ಅನಂತ ಮೋವಾಡಿ, ಸಮಿತಿ ಕಾರ್ಯದರ್ಶಿ ಹಾಗೂ ತಾಲೂಕು ತಹಸೀಲ್ದಾರ್ ಭೀಮ್ ಸೇನ್ ಕುಲಕರ್ಣಿ, ಉಪ ತಹಸೀಲ್ದಾರರಾದ ಲತಾ , ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿ ಉಪಸ್ಥಿತರಿದ್ದರು.