ಮಂಗಳೂರು : ಕ್ರೀಡಾಪಟುಗಳು, ಕೋಚ್ ಗಳು ಮತ್ತು ಕ್ರೀಡಾ ಇಲಾಖೆ ಎಷ್ಟಾದರೂ ಹಣ-ಸವಲತ್ತು ಕೇಳಿ. ನಾನು ಕೊಡ್ತೀನಿ. ಆದರೆ ಒಲಂಪಿಕ್ ನಲ್ಲಿ ರಾಜ್ಯದ ಪಟುಗಳು ದೇಶಕ್ಕಾಗಿ ಮೆಡಲ್ ತನ್ನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಯುವಜನ ಮತ್ತು ಕ್ರೀಡಾ ಇಲಾಖೆ ಮತ್ತು ಜಿಲ್ಲಾಡಳಿತ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ “ಕರ್ನಾಟಕ ಕ್ರೀಡಾಕೂಟ 2025 ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಗತ್ಯ ವೇದಿಕೆ ಮತ್ತು ಉತ್ತಮ ಪ್ರೋತ್ಸಾಹ ಇಲ್ಲದಿದ್ದರೆ ಕ್ರೀಡಾ ಕ್ಷೇತ್ರ ಮತ್ತು ಕ್ರೀಡಾಪಟುಗಳು ಬೆಳವಣಿಗೆ ಆಗಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಸರ್ಕಾರ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಹಾಜರಾತಿ ಸೇರಿ ಇನ್ನಿತರೆ ರಿಯಾಯ್ತಿಗಳನ್ನು ಕೊಡುವ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಪುನರುಚ್ಚರಿಸಿದರು.
ಮುಂದಿನ ಬಜೆಟ್ ನಲ್ಲಿ ಮಂಗಳೂರು ಮತ್ತು ಉಡುಪಿ ಕ್ರೀಡಾಂಗಣಗಳ ಉನ್ನತೀಕರಣಕ್ಕೆ ತಲಾ 3 ಕೋಟಿ ರೂಪಾಯಿ ನಿಗಧಿ ಮಾಡ್ತೀನಿ ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಘೋಷಿಸಿದರು.
ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಾಗ ಶೇ2 ರಷ್ಟು ಉದ್ಯೋಗಗಳು ಕ್ರೀಡಾಟುಗಳಿಗೆ ಮೀಸಲು ಇಡಲಾಗುವುದು. ಜೊತೆಗೆ ಪೊಲೀಸ್, ಅರಣ್ಯ ಇಲಾಖೆ ಸೇರಿ ಸಮವಸ್ತ್ರ ಧರಿಸುವ ಹುದ್ದೆಗಳಿಗೆ ಶೇ 3 ರಷ್ಟು ಉದ್ಯೋಗ ಕ್ರೀಡಾಪಟುಗಳಿಗೆ ಉದ್ಯೋಗ ಮೀಸಲು ಇಡಲಾಗುವುದು ಎಂದು ಸಿಎಂ ಘೋಷಿಸಿದರು.
ಒಲಂಪಿಕ್ ನಲ್ಲಿ ಮೆಡಲ್ ತಂದವರಿಗೆ 6 ಕೋಟಿ ರೂಪಾಯಿ ಕೊಡ್ತೀವಿ. ಹಾಗೆಯೇ ಏಷ್ಯಾ ಕ್ರೀಡಾಕೂಟ ಮತ್ತು ರಾಷ್ಟ್ರಮಟ್ಟದಲ್ಲಿ ಪದಕ ತಂದವರಿಗೂ ನಗದು ಬಹುಮಾನ ಕೊಡುತ್ತಿದ್ದೇವೆ. ಈ ಪ್ರೋತ್ಸಾಹ ಸದುಪಯೋಗಪಡಿಸಿಕೊಂಡು ಮೆಡಲ್ ಗಳನ್ನು ತಂದು ಕ್ರೀಡಾಕ್ಷೇತ್ರವನ್ನು ಬೆಳಗಿಸಿ, ಬೆಳೆಸಿ ಎಂದು ಕರೆ ನೀಡಿದರು.
ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್, ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಕೆ.ಗೋವಿಂದರಾಜು, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಐವನ್ ಡಿಸೋಜಾ, ಮಾಜಿ ಸಚಿವ ರಮಾನಾಥ ರೈ ಸೇರಿ ಜಿಲ್ಲೆಯ ಶಾಸಕರುಗಳು ಮತ್ತು ಪ್ರಮುಖರು ಉಪಸ್ಥಿತರಿದ್ದರು.