ಉಳ್ಳಾಲ : ಕೆ.ಸಿ.ರೋಡ್ ಕೋಟೆಕಾರು ಬ್ಯಾಂಕ್ ಸಿಬ್ಬಂದಿಯೂ ಸಿಸಿಟಿವಿಯಲ್ಲಿ ದೃಶ್ಯಗಳು ಸರಿಯಾಗಿ ಕಾಣುತ್ತಿಲ್ಲ ಎಂದು ದೂರು ನೀಡಿದ್ದರು ಹೀಗಾಗಿ ಸಿಸಿಟಿವಿ ದುರಸ್ತಿಗಾಗಿ ಸಂದೀಪ್ ಎಂಬುವರು ಮಧ್ಯಾಹ್ನ 12.30ರ ಸುಮಾರಿಗೆ ಬಂದಿದ್ದರು. ಲಾಕರ್ ಭಾಗದಲ್ಲಿರುವ ಸಿಸಿಟಿವಿಯ ವೈರ್‌ಗಳನ್ನು ಇಲಿಗಳು ತಿಂದಿರುವುದರಿಂದ ವೈರ್ ಸಂಪೂರ್ಣ ಬದಲಾಯಿಸುವ ಸಲುವಾಗಿ ಡಿವಿಆರ್ ಅನ್ನು ಪ್ರತ್ಯೇಕಿಸಿದ್ದರು.
ಈ ಮಧ್ಯೆ, ಸುಮಾರು1.10ರ ವೇಳೆಗೆ ಜೀನ್ಸ್ ಪ್ಯಾಂಟ್ ಧರಿಸಿದ್ದ ಐವರು ಮುಸುಕುಧಾರಿ ಆಗಂತುಕರು ಮೊದಲ ಮಹಡಿಯಲ್ಲಿರುವ ಬ್ಯಾಂಕ್‌ನೊಳಕ್ಕೆ ನುಗ್ಗಿದರು. ಅದು ಊಟದ ಸಮಯ ಆಗಿದ್ದರಿಂದ ಮೂವರು ಮಹಿಳಾ ಸಿಬ್ಬಂದಿ ಹಾಗೂ ಚಿನ್ನ ಪರಿಶೀಲನೆಗಾರ ರಾಮಚಂದ್ರ ಆಚಾರ್ಯ ಮತ್ತು ಸಂದೀಪ್ ಮಾತ್ರ ಇದ್ದರು ಗ್ರಾಹಕರು ಇರಲಿಲ್ಲ. ಸಿಸಿಟಿವಿ ದುರಸ್ತಿ ಕೆಲಸ ಆಗುತ್ತಿದ್ದುದರಿಂದ ಸ್ಟ್ರಾಂಗ್ ರೂಮಿನ ಬಾಗಿಲು ಕೂಡ ತೆರೆದಿತ್ತು
ಏಕಾಏಕಿ ನುಗ್ಗಿದ ದರೋಡೆಕೋರರು ತಲವಾರು ಝಳಪಿಸಿ, ಪಿಸ್ತೂಲು ಹಿಡಿದು ಕುಳಿತುಕೊಳ್ಳುವಂತೆ ಸಿಬ್ಬಂದಿಗೆ ಬೆದರಿಸಿದರು. ಈ ಪೈಕಿ ಇಬ್ಬರು ಕ್ಯಾಶ್ ಕೌಂಟರಿನೊಳಗೆ ನುಗ್ಗಿದರು. ಓರ್ವ ಸೀದಾ ಲಾಕರ್ ನತ್ತ ತೆರಳಿ ಚಿನ್ನವನ್ನು ಮೂರು ಗೋಣಿಗಳಲ್ಲಿ ತುಂಬಿಸಿ, ಬಳಿಕ ನಗದು ದೋಚಿದ್ದಾನೆ
ಈ ವೇಳೆ ಸಂದೀಪ್ ಅವರು ರಕ್ಷಣೆಗಾಗಿ ಕೈಮುಗಿದಿದ್ದು ಅವರ ಕೈಯಲ್ಲಿದ್ದ ಉಂಗುರವನ್ನು ಕಂಡು ಅದನ್ನೂ ಎಳೆದು ದೋಚಿದ್ದಾರೆ ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದ ತಂಡ, ಅಡ್ಡಿಪಡಿಸಿದಲ್ಲಿ ಶೂಟ್ ಮಾಡಿ ಕೊಲ್ಲುವ ಬೆದರಿಕೆ ಒಡ್ಡುತ್ತಲೇ ಕೃತ್ಯ ಎಸಗಿದೆ.
ಸಾಧಾರಣವಾಗಿ ಮುಸ್ಲಿಂ ವ್ಯಾಪಾರಸ್ಥರೇ ‘ಹೆಚ್ಚಾಗಿರುವ ಜಂಕ್ಷನ್‌ನಲ್ಲಿ ಶುಕ್ರವಾರವಾಗಿದ್ದರಿಂದ ಜುಮಾನ ಮಾಝ್ ಹಿನ್ನೆಲೆಯಲ್ಲಿ ಎಲ್ಲರೂ ಮಸೀದಿಗೆ ತೆರಳಿದ್ದರು. ಇದರಿಂದಾಗಿ ಅಂಗಡಿಗಳು ಎಲ್ಲವೂ ಬಂದ್ ಆಗಿದ್ದು ಪ್ರದೇಶ ನಿರ್ಜನವಾಗಿತ್ತು
ಈ ವೇಳೆ ಒಬ್ಬರು ಸಿಬ್ಬಂದಿ ಬೊಬ್ಬೆ ಹಾಕಿದರು. ಆಗ ಅಲ್ಲೇ ಕೆಳಗಿದ್ದ ಬೇಕರಿಗೆ ಬಂದಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಇಬ್ಬರು ಮೇಲೆ ಓಡಿ ಬಂದರು ವಿದ್ಯಾರ್ಥಿಗಳಿಗೂ ಬೆದರಿಸಿದ ತಂಡ, ಅವರಿಗೆ ವಾಪಸ್ ಹೋಗುವಂತೆ ಕನ್ನಡ ಭಾಷೆಯಲ್ಲಿ ಬೈಯ್ದಿದೆ
ಬಳಿಕ ಬ್ಯಾಂಕ್ ಮುಂದಿದ್ದ ಫಿಯೆಟ್ ಲಿನಿಯಾ ಕಾರಿನಲ್ಲಿ ಗೋಣಿಚೀಲಗಳನ್ನು ತುಂಬಿಕೊಂಡು ಪರಾರಿಯಾಗಿದ್ದಾರೆ. ಬ್ಯಾಂಕ್ ಎದುರಿನ ಮನೆಯ ನಿವಾಸಿ ಉಷಾ ಎಂಬುವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಆರೋಪಿಗಳು ಕೇರಳದತ್ತ ತೆರಳಿದ್ದು ಇದಕ್ಕೆ ಸಾಕ್ಷಿಯಾಗಿ ತಲಪಾಡಿ ಟೋಲ್ ಗೇಟ್ ನಲ್ಲಿ 150 ರು. ಕೊಟ್ಟು ರಶೀದಿ ಪಡೆದುಕೊಂಡಿದ್ದು ಬೆಳಕಿಗೆ ಬಂದಿದೆ ನಂಬರ್ ಪ್ಲೇಟ್ ನಕಲಿಯಾಗಿದ್ದರಿಂದ ಕಾರಿನಲ್ಲಿ ಫಾಸ್ಟಟ್ಯಾಗ್ ಇರಲಿಲ್ಲ. ದುಷ್ಕರ್ಮಿಗಳ ಪತ್ತೆಗೆ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.
ಈ ಮಧ್ಯೆ, ಆತುರದಲ್ಲಿ ಇನ್ನು 6 ಕೋಟಿ ರು. ಮೌಲ್ಯದ 12 ಕೆ.ಜಿ ಚಿನ್ನವನ್ನು ದರೋಡೆಕೋರರು ಬಿಟ್ಟು ಹೋಗಿದ್ದಾರೆ ಎಂದು ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದಾರೆ.