ಬೈಂದೂರು : ಬೈಂದೂರು ತಾಲೂಕಿನಲ್ಲಿ ಸರಕಾರಿ ಜಾಗದಲ್ಲಿ ಹಲವಾರು ವರ್ಷಗಳಿಂದ ಮನೆ ಕಟ್ಟಿ ಕೊಂಡು ವಾಸವಾಗಿರುವ 20 ಫಲಾನುಭವಿಗಳಿಗೆ ಶಾಸಕ ಗುರುರಾಜ್ ಶೆಟ್ಟಿ ಗಂಟಿ ಹೊಳೆಯವರು ಜನವರಿ 16ರಂದು ತಾಲೂಕು ಕಚೇರಿಯಲ್ಲಿ ಹಕ್ಕು ಪತ್ರ ವಿತರಿಸಿದರು. ನಂತರ ಮಾತನಾಡಿದ ಶಾಸಕರು, ವಾಸ್ತವ್ಯದ ಹಕ್ಕು ಎಲ್ಲರಿಗೂ ಅಗತ್ಯವಾಗಿ ದೊರಕಬೇಕು. ಹಲವು ವರ್ಷಗಳಿಂದ ಸರಕಾರಿ ಜಾಗದಲ್ಲಿ ಮನೆ ಕಟ್ಟಿ ವಾಸವಾಗಿದ್ದರೂ ಕೂಡ ಹಕ್ಕು ಪತ್ರ ಇಲ್ಲದೇ ಸರಕಾರದ ಯಾವುದೇ ಸೌಲಭ್ಯ ಪಡೆಯದೇ ಇರುವ ಕುಟುಂಬಗಳು ಕಳೆದ ಹಲವು ವರ್ಷಗಳಿಂದ ಹಕ್ಕು ಪತ್ರ ಕ್ಕಾಗಿ ಕಚೇರಿ ಯಿಂದ ಕಚೇರಿಗೆ ಅಲೆದಾಡುತ್ತಿರುವುದನ್ನು ಕಂಡಿದ್ದೇನೆ. ಕ್ಷೇತ್ರ ವ್ಯಾಪ್ತಿಯಲ್ಲಿ ಯಾವೊಂದೂ 94 ಸಿ ಅರ್ಜಿದಾರರು ಹಕ್ಕು ಪತ್ರ ವಂಚಿತರಾಗದೆ ಉಳಿದು ಕೊಳ್ಳ ಬಾರದು ಎಂಬ ಉದ್ದೇಶದಿಂದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಹಕ್ಕು ಪತ್ರ ಒದಗಿಸಲು ಉದ್ದೇಶಿಸಲಾಗಿದೆ. ಅದರಂತೆ ತಾಲೂಕಿನ 06 ಗ್ರಾಮಗಳ ಒಟ್ಟು 20 ಜನ ಅರ್ಹ ಫಲನುಭವಿಗಳಿಗೆ ಹಕ್ಕು ಪತ್ರ ಒದಗಿಸಲಾಗಿದೆ. ಹಳ್ಳಿ ಹೊಳೆ ಗ್ರಾಮದ 07, ಹೇರೂರು ಗ್ರಾಮದ 09, ಜಡ್ಕಲ್ ಗ್ರಾಮದ 02, ಹಾಗೂ ನಾಡ ಗ್ರಾಮದ 02 ಫಲಾನುಭವಿಗಳು ತಮ್ಮ ವಾಸ್ತವ್ಯದ ಮನೆಯಡಿಯ ಭೂಮಿ ಹಕ್ಕು ಪಡೆದುಕೊಂಡಿದ್ದಾರೆ. ಇವರೆಲ್ಲರಿಗೂ ಮುಂದಿನ ದಿನಗಳಲ್ಲಿ ಸರಕಾರದ ವಸತಿ ಯೋಜನೆಯಡಿಯಲ್ಲಿ ಮನೆ ಸೌಲಭ್ಯ ಹಾಗೂ ಇನ್ನಿತರ ಸರಕಾರಿ ಸವಲತ್ತು ದೊರಕಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. ಬಾಕಿ ಉಳಿದ ಅರ್ಹ ಫಲನುಭವಿಗಳಿಗೂ ತ್ವರಿತವಾಗಿ 94 ಸಿ ಯಡಿ ಹಕ್ಕು ಪತ್ರ ಮಂಜೂರಾತಿಗೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.