ವಾಷಿಂಗ್ಟನ್ : ಜಗತ್ತು ಅನೇಕ ಯುದ್ಧಗಳಿಗೆ ಸಾಕ್ಷಿಯಾಗಿರುವ ಹೊತ್ತಲೇ ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 3ನೇ ವಿಶ್ವಯುದ್ಧ ನಡೆಯದಂತೆ ತಡೆಯುವ ಭರವಸೆ ನೀಡಿದ್ದಾರೆ.
ಕ್ಯಾಪಿಟಲ್ ಒನ್ ಅರೇನಾದಲ್ಲಿ ನಡೆದ ‘ಮೇಕ್ ಅಮೆರಿಕ ಗ್ರೇಟ್ ಅಗೇನ್’ ವಿಜಯದ ರ್ಯಾಲಿಯಲ್ಲಿ ಮಾತನಾಡಿದ ಟ್ರಂಪ್, ಇಸ್ರೇಲ್-ಹಮಾಸ್ ಕದನ ವಿರಾಮದ ಶ್ರೇಯವನ್ನು ಪಡೆದರು. ‘ನಾನಂದು ಅಧ್ಯಕ್ಷನಾಗಿದ್ದರೆ ಯುದ್ಧ ನಡೆಯುತ್ತಿರಲೇ ಇಲ್ಲ. ಮಧ್ಯ ಪ್ರಾಚ್ಯದಲ್ಲಿನ ಉದ್ವಿಗ್ನತೆ ನಿಲ್ಲಿಸಿ 3ನೇ ವಿಶ್ವಯುದ್ಧ ನಡೆಯದಂತೆ ಮಾಡುತ್ತೇನೆ ಎಂದರು.
ಅಲ್ಲದೆ, ಹಿಂದಿನ ಅಧ್ಯಕ್ಷ ಜೋ ಬೈಡೆನ್ ಜಾರಿಗೆ ತಂದಿದ್ದ ಆದೇಶಗಳನ್ನು ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ರದ್ದುಪಡಿಸುವುದಾಗಿ ಹೇಳಿದರು.
‘ನಾವು ಅಮೆರಿಕದ ಇತಿಹಾಸದಲ್ಲಿ ಅತಿದೊಡ್ಡ ಗಡೀಪಾರು ಕಾರ್ಯವನ್ನು ಆರಂಭಿಸುತ್ತೇವೆ. ಗಡಿ ಅತಿಕ್ರಮಣಕಾರರನ್ನು ಮಟ್ಟಹಾಕಿ ಅಕ್ರಮ ವಲಸಿಗರನ್ನು ಹೊರಹಾಕುತ್ತೇವೆ. ಡ್ರಗ್ ದಂಧೆ ನಡೆಸುವವರನ್ನು ವಿದೇಶಿ ಉಗ್ರ ಸಂಘಟನೆಗಳೆಂದು ಪರಿಗಣಿಸುತ್ತೇವೆ’ ಎಂದರು.