ಛತ್ತೀಸ್ಗಢ : ಛತ್ತೀಸ್ಗಢದಲ್ಲಿ ನಕ್ಸಲರ ವಿರುದ್ಧದ ಭದ್ರತಾ ಪಡೆಗಳ ಕಾರ್ಯಾಚರಣೆ ಮುಂದುವರೆದಿದ್ದು ಛತ್ತೀಸ್ಗಢ ಮತ್ತು ಒಡಿಶಾ ಗಡಿ ಪ್ರದೇಶವಾದ ಗರಿಯಾ ಬಂದ್ನಲ್ಲಿ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ತಲೆಗೆ 1 ಕೋಟಿ ರೂ.ಇನಾಮು ಹೊಂದಿದ್ದ ಮಾವೋವಾದಿ ನಾಯಕ ಚಲಪತಿ ಸೇರಿದಂತೆ 16 ನಕ್ಸಲರು ಹತರಾಗಿದ್ದಾರೆ
ಒಡಿಶಾದ ನೌಪಾಡ ಜಿಲ್ಲೆಯ ಗಡಿಯಿಂದ 5 ಕಿ.ಮೀ ದೂರದಲ್ಲಿರುವ ಛತ್ತೀಸ್ಗಢದ ಕುಲಾರಿಘಾಟ್ ಮೀಸಲು ಅರಣ್ಯದಲ್ಲಿ ಮಾವೋವಾದಿಗಳ ಇರುವಿಕೆಯ ಖಚಿತ ಮಾಹಿತಿಯ ಮೇರೆಗೆ ಮಧ್ಯರಾತ್ರಿಯಿಂದಲೇ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು.
ಮುಂಜಾನೆ ಕಾರ್ಯಾಚರಣೆ ಚುರುಕುಗೊಳಿಸಿದ್ದ ಸಿಬ್ಬಂದಿಯ ಗುಂಡಿನ ದಾಳಿಗೆ ಇಬ್ಬರು ಮಹಿಳಾ ನಕ್ಸಲರು ಸಾವನ್ನಪ್ಪಿದ್ದು, ಕೋಬ್ರಾ ಯೋಧರೊಬ್ಬರು ಗಾಯಗೊಂಡಿದ್ದರು.
ಬಳಿಕ ಸೋಮವಾರ ತಡರಾತ್ರಿ ಮತ್ತು ಮಂಗಳವಾರ ಮುಂಜಾನೆ ಇಲ್ಲಿನ ಮೈನ್ಪುರ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ಮತ್ತೆ ಗುಂಡಿನ ದಾಳಿ ನಡೆದಿದ್ದು, 12 ಮಂದಿ ನಕ್ಸಲೀಯರನ್ನು ಸಿಬ್ಬಂದಿ ಹೊಡೆದುರುಳಿಸಿದ್ದಾರೆ. ಜಿಲ್ಲಾ ರಿಸರ್ವ್ ಗಾರ್ಡ್, ಕೇಂದ್ರೀಯ ಮೀಸಲು ಪೊಲೀಸ್ ಪಡೆ, ಛತ್ತೀಸ್ಗಢದ ಕೋಬ್ರಾ ಮತ್ತು ಒಡಿಶಾದ ವಿಶೇಷ ಕಾರ್ಯಾಚರಣೆ ಗುಂಪು ಮತ್ತು ಭದ್ರತಾ ಸಿಬ್ಬಂದಿ ಜಂಟಿ ತಂಡವು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ಕಾರ್ಯಾಚರಣೆ ಇನ್ನು ಕೂಡ ಮುಂದುವರೆದಿದೆ